1-5-2024, ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ದೇಶದ ಜನರು ತೀರ್ಮಾನ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಿಶ್ವಾಸದಿಂದ ನುಡಿದರು.
ಕಲಬುರಗಿ ಲೋಕಸಭಾ ಕ್ಷೇತ್ರದ ಚಿತ್ತಾಪುರದಲ್ಲಿ ಇಂದು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಡಾ. ಉಮೇಶ್ ಜಾಧವ್ ಅವರ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ. ರಾಜ್ಯ ಮಾತ್ರವಲ್ಲದೆ, ರಾಷ್ಟ್ರದಾದ್ಯಂತ ಜನರು ದೇಶದ ಸುರಕ್ಷತೆ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಬಯಸುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ಸಾಮಾನ್ಯ ಜನರಲ್ಲೂ ಮೋದಿಯವರ ನಾಯಕತ್ವದ ಕುರಿತು ವಿಶ್ವಾಸ ಹೆಚ್ಚಾಗಿದೆ. ಕಳೆದ 10 ವರ್ಷಗಳಲ್ಲಿ ಮೋದಿಯವರು ದೇಶದ ಪ್ರಧಾನಿಯಾದ ಬಳಿಕ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಅವರು ಕೆಲಸ ಮಾಡುತ್ತಿದ್ದಾರೆ. ಹಿಂದೆ ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ ‘ನಾನು ಪ್ರಧಾನಿಯಾಗಿ 100 ರೂ. ಕಳಿಸಿದರೆ ಅದು ಚಿತ್ತಾಪುರಕ್ಕೆ ಹೋಗಿ ತಲುಪಿದಾಗ ಬರೀ 15-20 ರೂ. ಆಗುತ್ತದೆ’ ಎಂದಿದ್ದರು. ಇನ್ನುಳಿದ 80-85 ರೂಪಾಯಿ ಮಧ್ಯಸ್ಥಿಕೆದಾರರ ಪಾಲಾಗುತ್ತದೆ ಎಂದು ತಿಳಿಸಿದ್ದರು ಎಂದು ನೆನಪಿಸಿದರು.
ಮೋದಿಜೀ ಅವರು ಪ್ರಧಾನಿಯಾದ ಬಳಿಕ ಪ್ರತಿಯೊಬ್ಬ ಬಡವರಿಗೆ ಬ್ಯಾಂಕ್ ಖಾತೆ ತೆಗೆಸಿ ಮೋದಿಯವರು ಕೊಡುವ ಸೌಲಭ್ಯಗಳು ಮಧ್ಯಸ್ಥಿಕೆಯ ಹಾವಳಿ ಇಲ್ಲದೆ 100 ರೂ. ಅನುದಾನದಲ್ಲಿ 100 ರೂ. ತಲುಪುವ ಕೆಲಸ ಆಗಿದ್ದರೆ ಅದು ಬಿಜೆಪಿ ನೇತೃತ್ವದ ಮೋದಿಜೀ ಅವರ ಕಾರ್ಯ ಎಂದು ವಿಶ್ಲೇಷಿಸಿದರು. ಕಿಸಾನ್ ಸಮ್ಮಾನ್ ಯೋಜನೆಯ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ 6 ಸಾವಿರವನ್ನು ನೇರವಾಗಿ ಖಾತೆಗೆ ಹಾಕಲಾಗುತ್ತಿತ್ತು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಇದ್ದಾಗ ರೈತರಿಗೆ ಅನುಕೂಲ ಆಗಲು ಹೆಚ್ಚುವರಿ 4 ಸಾವಿರ ಕೊಟ್ಟರು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಆ 4 ಸಾವಿರ ರೂ. ನಿಲ್ಲಿಸಿದರು ಎಂದು ಟೀಕಿಸಿದರು.
ಯೂರಿಯ ಮತ್ತಿತರ ರಸಗೊಬ್ಬರಕ್ಕೆ ಗರಿಷ್ಠ ಸಹಾಯಧನವನ್ನು ನೀಡುವ ಸರಕಾರ ಬಿಜೆಪಿಯದು ಎಂದು ವಿವರಿಸಿದರು. ಮೋದಿಯವರು ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಕಾಂಗ್ರೆಸ್ ಸರಕಾರವು ರೈತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. 800-900 ರೈತರು ಆತ್ಮಹತ್ಯೆ ಮಾಡಿಕೊಂಡರೂ ಪರಿಹಾರ ನೀಡಿಲ್ಲ ಎಂದು ಆಕ್ಷೇಪಿಸಿದರು.
ನಿಮ್ಮ ಯಡಿಯೂರಪ್ಪ ಅವರು ರೈತರ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ರೈತರಿಗಾಗಿ ಸದಾ ಸ್ಪಂದಿಸಿದರು. ನೆರೆ ಬಂದಾಗ ಗರಿಷ್ಠ ಪರಿಹಾರ ಕೊಟ್ಟಿದ್ದಾರೆ ಎಂದು ವಿವರಿಸಿದರು. ಜನಪರ ಯೋಜನೆಗಳನ್ನು ಗಮನಿಸಿ ಬಿಜೆಪಿಯನ್ನು ಬೆಂಬಲಿಸಲು ಮನವಿ ಮಾಡಿದರು. ಉಚಿತ ವಿದ್ಯುತ್ ಎನ್ನುತ್ತಾರೆ. ಆದರೆ, ವಿದ್ಯುತ್ ದರ ದ್ವಿಗುಣಗೊಂಡಿದೆ. ಉಚಿತ ಬಸ್ ಪ್ರಯಾಣವೆನ್ನುತ್ತಾರೆ. ಬಸ್ ಟಿಕೆಟ್ ದರ ಶೇ 30-40ರಷ್ಟು ಜಾಸ್ತಿಯಾಗಿದೆ. ರೈತರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲೂ ದರ ಏರಿಕೆ ಮಾಡಿದ್ದಾರೆ ಎಂದು ಟೀಕಿಸಿದರು.
ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ, ತಾಲ್ಲೂಕು ಅಧ್ಯಕ್ಷ ರವೀಂದ್ರ, ವಿಧಾನಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಮಾಜಿ ಸಚಿವ ಬಾಬುರಾವ ಚವ್ಹಾಣ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೆರೆ ಮೊದಲಾದ ಪ್ರಮುಖರು ಇದ್ದರು.