ಬೆಂಗಳೂರು,ಮೇ.24- ಸುಬ್ರಹ್ಮಣ್ಯಪುರ ಬಳಿಯ ಯುವತಿ ಪ್ರಭುದ್ಧರನ್ನು ಕೊಲೆ ಮಾಡಿದ ಅಪ್ರಾಪ್ತ ಬಾಲಕನನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶಂಕಾಸ್ಪದವಾಗಿ ನಡೆದಿದ್ದ ಪ್ರಭುದ್ಧ ಸಾವಿನ ಪ್ರಕರಣವನ್ನು ಸುಬ್ರಹ್ಮಣ್ಯಪುರ ಪೊಲೀಸರು ಭೇದಿಸಿದ್ದು, ಅಪ್ರಾಪ್ತನೊಬ್ಬ ಸ್ನೇಹಿತನ ಕನ್ನಡಕ ರಿಪೇರಿ ವಿಚಾರಕ್ಕೆ ಪ್ರಬುದ್ಧಳ ಕೊಲೆ ನಡೆದಿರುವುದನ್ನು ಪತ್ತೆಹಚ್ಚಿದ್ದಾರೆ.
ಪ್ರಬುದ್ಧಳ ತಮ್ಮ ಹಾಗೂ ಕೊಲೆ ಮಾಡಿದ ಆರೋಪಿ ಇಬ್ಬರು ಸ್ನೇಹಿತರಾಗಿದ್ದರು. ಆರೋಪಿ ತನ್ನ ಸ್ನೇಹಿತನ ಕನ್ನಡಕವನ್ನು ಡ್ಯಾಮೇಜ್ ಮಾಡಿದ್ದ. ಇದನ್ನು ರಿಪೇರಿ ಮಾಡಿಸಿ ಕೊಡು ಎಂದು ಸ್ನೇಹಿತ ಪಟ್ಟು ಹಿಡಿದಿದ್ದು ರಿಪೇರಿಗೆ ಕಾಸಿಲ್ಲದೇ ಅಪ್ರಾಪ್ತ ಆರೋಪಿ ಸುಮ್ಮನಾಗಿದ್ದ.
ಕೊಲೆಯಾದ ದಿನ ಪ್ರಬುದ್ಧ ಮನೆಗೆ ಬಂದಿದ್ದ ಆರೋಪಿ, ಪರ್ಸ್‌ನಲ್ಲಿದ್ದ ಎರಡು ಸಾವಿರ ರೂ ಕದ್ದಿದ್ದ. ಆರೋಪಿ ಕದಿಯುವುದನ್ನು ಕಂಡ ಪ್ರಬುದ್ಧ ಪ್ರಶ್ನೆ ಮಾಡಿದ್ದಳು. ಇದರಿಂದ ಗಾಬರಿಗೊಂಡ ಆರೋಪಿ ಕ್ಷಮಿಸಿಬಿಡು ಎಂದು ಕಾಲು ಹಿಡಿದುಕೊಂಡಿದ್ದ.
ಈ ಗಲಿಬಿಲಿಯಲ್ಲಿ ಆರೋಪಿ ಕಾಲು ಹಿಡಿದಾಗ ಪ್ರಬುದ್ಧ ಆಯತಪ್ಪಿ ಬಿದ್ದಿದ್ದಳು. ಈ ವೇಳೆ ತಲೆಗೆ ಪೆಟ್ಟು ಬಿದ್ದಾಗ, ಪ್ರಜ್ಞೆ ತಪ್ಪಿದ್ದಳು. ಇದರಿಂದ ಆತಂಕಗೊಂಡ ಆರೋಪಿ ಆತ್ಮಹತ್ಯೆ ಎಂಬಂತೆ ಬಿಂಬಿಸಲು ಕೈ ಹಾಗೂ ಕುತ್ತಿಗೆಯನ್ನು ಕೊಯ್ದು ಅಲ್ಲಿಂದ ಪರಾರಿಯಾಗಿದ್ದ. ಪ್ರಜ್ಞೆ ತಪ್ಪಿದ್ದ ಪ್ರಬುದ್ಧ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಳು.
ಘಟನೆಯ ವಿವರ:
ಕಳೆದ ಮೇ 15ರ ಮಧ್ಯಾಹ್ನ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಪ್ರಬುದ್ಧ ಎಂಬಾಕೆ ಮನೆಯ ಬಾತ್ ರೂಂನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆಕೆಯ ಕುತ್ತಿಗೆ ಹಾಗೂ ಕೈ ಕೊಯ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು.
ಆ ದಿನ ಪ್ರಬುದ್ಧ ತಾಯಿ ಸೌಮ್ಯಗೆ ಕರೆ ಮಾಡಿ ಫ್ರೆಂಡ್ಸ್ ಜತೆಗೆ ಇದ್ದೀನಿ ಪಾನಿಪುರಿ ತಿಂದು ಮನೆಗೆ ಹೋಗುತ್ತಿನಿ ಅಂದಿದ್ದಳು. ನಂತರ ಆಫೀಸ್ ಮುಗಿಸಿ ಮನೆಗೆ ಬಂದು ನೋಡಿದಾಗ ಮಗಳು ಬಾತ್ ರೂಮಿನಲ್ಲಿ ಬರ್ಬರವಾಗಿ ಕೊಲೆಯಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಮನೆಯ ಮುಂದಿನ ಡೋರ್ ಲಾಕ್ ಆಗಿತ್ತು. ಆದರೆ ಹಿಂದಿನ ಡೋರ್ ಓಪನ್ ಆಗಿತ್ತು ಎಂದು ಸೌಮ್ಯ ಘಟನೆ ವಿವರ ನೀಡಿದ್ದರು. ಮಗಳ ಫೋನ್ ಸೋಫ್ ಮೇಲೆ ಇತ್ತು. ಆಕೆಯನ್ನು ಆಸ್ಪತ್ರೆಗೆ ಕೆರೆದುಕೊಂಡು ಹೋಗಿ ಬರುವಷ್ಟರಲ್ಲಿ ಫೋನ್ ಕೂಡ ಕಳ್ಳತನ ಆಗಿತ್ತು. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವವಳು ಅಲ್ಲ.. ಯಾರೋ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಕೊಲೆಗೆ ಕಾರಣವನ್ನು ಭೇದಿಸಿದ್ದಾರೆ.
Previous Articleಪ್ರಜ್ವಲ್ ರೇವಣ್ಣನಿಗೆ ದೇವೇಗೌಡರ ಎಚ್ಚರಿಕೆ.
Next Article ನಿರ್ಮಾಪಕ ಸೌಂದರ್ಯ ಜಗದೀಶ್ ಸಾವಿನ ರಹಸ್ಯ ಪತ್ತೆ.