ಬೆಂಗಳೂರು,ಮೇ.16:
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.ಈ ಬಗ್ಗೆ ಸರ್ಕಾರ ಗಮನ ಹರಿಸದೆ ನೌಕರರ ವರ್ಗಾವಣೆಯಲ್ಲಿ ನಿರತವಾಗಿದೆ. ವರ್ಗಾವಣೆಯ ಪ್ರತಿಯೊಂದು ಹುದ್ದೆಗೂ ದರ ನಿಗದಿಪಡಿಸಲಾಗಿದೆ ಎಂದು ಬಿಜೆಪಿ ಆಪಾದಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ, ಮಾಜಿ ಶಾಸಕ ಪಿ.ರಾಜೀವ್ ಕರ್ನಾಟಕದಲ್ಲಿ ಹಿಂದೆಂದೂ ಕಾಣದ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಸಮಾಜಘಾತುಕ ಶಕ್ತಿಗಳು, ಮೂಲಭೂತವಾದಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಆಡಳಿತಕ್ಕೆ ಬಂದು ಒಂದು ವರ್ಷ ಪೂರೈಸಿರುವ ಸರ್ಕಾರ ಜನಸಾಮಾನ್ಯರಿಗೆ ರಕ್ಷಣೆ ಕೊಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು
ಅಶ್ವತ್ಥನಾರಾಯಣ ಕಿಡಿಕಾರಿದರು.
ಒಂದು ವರ್ಷದಲ್ಲಿ ಕೊಲೆ, ಸುಲಿಗೆ, ಮತಾಂತರ ತುಷ್ಟೀಕರಣದಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಶೂನ್ಯ ಅಭಿವೃದ್ಧಿ ಮತ್ತು ಅಸಮರ್ಥ ಸರ್ಕಾರ ಒಂದು ವರ್ಷದ ಅವಧಿಯಲ್ಲಿ ಕಾಂಗ್ರೆಸ್‌ನ ಸಾಧನೆ ಎಂದು ವ್ಯಂಗ್ಯವಾಡಿದರು.
ಯಾವಾಗ ಏನು ಆಗುತ್ತದೆ ಎಂದು ಜನರು ಭಯಭೀತರಾಗಿದ್ದಾರೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಗೃಹ ಇಲಾಖೆ ನಿರ್ವಹಣೆ ಮಾಡುವಲ್ಲಿ ಸಚಿವ ಡಾ.ಜಿ.ಪರಮೇಶ್ವರ್ ವಿಫಲರಾಗಿದ್ದಾರೆ. ತಕ್ಷಣವೇ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಆಡಳಿತ ನಡೆಸಲು ಸರ್ಕಾರ ವಿಫಲವಾಗಿದೆ. ಜನರು ಏಕಾದರೂ ಇಂತಹ ಪಕ್ಷವನ್ನು ಅಧಿಕಾರಕ್ಕೆ ತಂದೆವೋ ಎಂದು ಹಿಡಿಶಾಪ ಹಾಕುತ್ತಿದ್ದಾರೆ. ರಾಷ್ಟ್ರೀಯ ಅಪರಾಧ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ ಶೇ. 60 ರಷ್ಟು ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದರು.
ಹುಬ್ಬಳ್ಳಿಯಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ಎರಡು ಕಗ್ಗೊಲೆಗಳಾಗಿವೆ. ನೇಹಾ ಹತ್ಯೆ ಬಳಿಕ ಇದೀಗ ಅಂಜಲಿ ಕೊಲೆಯಾಗಿದೆ. ಈ ಬಂಡ ಸರ್ಕಾರದಲ್ಲಿ ಜನಸಾಮಾನ್ಯರಿಗೆ ಸುರಕ್ಷತೆ ಇಲ್ಲವಾಗಿದೆ. ಕೊಲೆ, ಸುಲಿಗೆ ವಸೂಲಿ ನಿರಂತರವಾಗಿ ನಡೆಯುತ್ತಿವೆ. ಒಂದು ರೀತಿ ಬಂಡ ರೀತಿಯಲ್ಲಿ ಸರ್ಕಾರ ವರ್ತನೆ ಮಾಡುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು.
ಪಿ.ರಾಜೀವ್ ಮಾತನಾಡಿ, ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಇಲಾಖೆಯಲ್ಲಿನ ಆಯಕಟ್ಟಿನ ಹುದ್ದೆಗಳಿಗೆ ಇಂತಿಷ್ಟು ಹಣ ನೀಡಿದರೆ ಮಾತ್ರ ವರ್ಗಾವಣೆ ಮಾಡಲಾಗುತ್ತದೆ. ಪ್ರತಿ ಇಲಾಖೆಯಲ್ಲೂ ಒಂದೊಂದು ಹುದ್ದೆಗೆ ಇಂತಿಷ್ಟು ಎಂದು ದರ ನಿಗದಿಪಡಿಸಲಾಗಿದೆ ಎಂದು ಕಿಡಿಕಾರಿದರು.
ಸರ್ಕಾರಕ್ಕೆ ಜೀವ ಇದೆಯೇ? ಅಥವಾ ಸತ್ತು ಹೋಗಿದೆಯೇ? ಮಹಿಳೆಯರು, ದಲಿತರು, ಅಮಾಯಕರ ರಕ್ಷಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ರಾಜ್ಯಪಾಲರು ವಜಾ ಮಾಡಬೇಕೆಂದು ಆಗ್ರಹಿಸಿದರು
ಜನರ ರಕ್ಷಣೆ, ಆಸ್ತಿಪಾಸ್ತಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕರ್ತವ್ಯ. ಶಾಂತಿಯ ಬೀಡಾಗಿದ್ದ ಕರ್ನಾಟಕ ಇಂದು ಕೊಲೆಗಡುಕರ ತಾಣವಾಗಿದೆ ಎಂದರು.
ಪ್ರಮುಖ ಆರೋಪಿಗಳನ್ನು ಬಿಟ್ಟು ಅಮಾಯಕರ ಮೇಲೆ ದೂರು ದಾಖಲಿಸಲಾಗುತ್ತದೆ. ವಿದ್ಯಾರ್ಥಿನಿ ಅಂಜಲಿ ಕೊಲೆಗೂ ಮುನ್ನ ನಿನ್ನನ್ನು ನೇಹಾ ರೀತಿಯಲ್ಲಿ ಕೊಲೆ ಮಾಡುತ್ತೇನೆಂದು ಆರೋಪಿ ಬೆದರಿಕೆ ಹಾಕಿದ್ದ. ಈ ಬಗ್ಗೆ ಅವಳಿಗೆ ಸಂಬಂಧಪಟ್ಟವರು ದೂರು ಕೊಟ್ಟಿದ್ದರೂ ಇದನ್ನು ಪೊಲೀಸರು ಮೂಢನಂಬಿಕೆ ಎಂದು ಹೇಳಿದ್ದಾರೆ. ಮೊದಲು ಈ ಅಧಿಕಾರಿಗಳನ್ನು ಸೇವೆಯಿಂದಲೇ ಶಾಶ್ವತವಾಗಿ ವಜಾಗೊಳಿಸಬೇಕೆಂದು ಒತ್ತಾಯ ಮಾಡಿದರು.