ಬೆಂಗಳೂರು,ಫೆ.3,:
ರಾಜಕೀಯ ನಾಯಕರ ಆರೋಪ ಪ್ರತ್ಯಾರೋಪ ಮತ್ತು ವಾಕ್ಸಮರಗಳ ವೇದಿಕೆಯಾಗಿರುವ ರಾಜ್ಯದ ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧವನ್ನು ಸಾಹಿತಿಗಳು ಚಿಂತಕರು ಮತ್ತು ಬರಹಗಾರರ ಘೋಷ್ಠಿಗಳ ಅಖಾಡವನ್ನಾಗಿಸಲು ಸಿದ್ಧತೆ ನಡೆಸಲಾಗಿದೆ
ಸಾಹಿತಿಗಳು, ಬರಹಗಾರರು, ವಿದ್ವಾಂಸರನ್ನು ವಿಧಾನಸಭೆಗೆ ಹತ್ತಿರವಾಗಿಸುವ ಉದ್ದೇಶದೊಂದಿಗೆ ಸಾಹಿತ್ಯ ಉತ್ಸವ ಆಯೋಜಿಸಲಾಗುತ್ತಿದೆ ಎಂದು ವಿಧಾನಸಭೆ ಅಧ್ಯಕ್ಷ ಯುಟಿ ಖಾದರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ವಿಧಾನಸೌಧದ ಅವರಣದಲ್ಲಿ ಸಾಹಿತ್ಯ ಉತ್ಸವ, ಸಾಂಸ್ಕೃತಿಕ ಉತ್ಸವ, ಪುಸ್ತಕ ಮೇಳ, ಆಹಾರ ಮೇಳಗಳನ್ನು ಇದೇ 27ರಿಂದ ಮಾರ್ಚ್ 3 ರವರೆಗೆ ಹಮ್ಮಿಕೊಳ್ಳಲಿದ್ದೇವೆ’ ಎಂದು ತಿಳಿಸಿದರು.
ಈ ವೇಳೆ ಒಬ್ಬ ಸಾಹಿತಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದೇವೆ. ಸಾಹಿತ್ಯ ಮೇಳದಲ್ಲಿ ಎಲ್ಲರೂ ಮುಕ್ತವಾಗಿ ಪಾಲ್ಗೊಳ್ಳಬೇಕು ಎಂಬ ದೃಷ್ಟಿಯಿಂದ ವಿಧಾನಸೌಧಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇರಲಿದೆ. ಭದ್ರತೆ ದೃಷ್ಟಿಯಿಂದ ವಿಶೇಷ ತಪಾಸಣಾ ವ್ಯವಸ್ಥೆ ಮಾಡುತ್ತೇವೆ. ಈ ಸಾಹಿತ್ಯ ಉತ್ಸವವನ್ನು ಪ್ರತಿ ವರ್ಷವೂ ಏರ್ಪಡಿಸಬೇಕು ಎಂಬುದು ನಮ್ಮ ಆಶಯ’ ಎಂದು ವಿವರಿಸಿದರು
ಸಾಹಿತ್ಯ ಉತ್ಸವ ಆಯೋಜನೆಗಾಗಿ ವಿಧಾನಸಭೆ ಸಚಿವಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಪೊಲೀಸ್ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಎಡ, ಬಲ ಎಂಬ ಭೇದಬಾವ ಮಾಡದೇ ಎಲ್ಲರಿಗೂ ಮುಕ್ತ ಅವಕಾಶ ನೀಡುವುದು ನಮ್ಮ ಉದ್ದೇಶ. ಕಾರ್ಯಕ್ರಮ ಆಯೋಜನೆ ಬಗ್ಗೆ ಸಮಿತಿಯೇ ನಿರ್ಧಾರ ಕೈಗೊಳ್ಳಲಿದೆ. ಅದರಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಹೇಳಿದರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ವಿವಿಧ ಅಕಾಡೆಮಿಗಳು, ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳು ಹಾಗೂ ಖಾಸಗಿ ಪ್ರಕಾಶನ ಸಂಸ್ಥೆಗಳ ಮಳಿಗೆಗಳು ಸೇರಿದಂತೆ 150 ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಉತ್ಸವದಲ್ಲಿ ಕನ್ನಡ ಭಾಷೆಗೆ ಶೇ 80ರಷ್ಟು ಹಾಗೂ ಇತರ ಭಾಷೆಗಳಿಗೆ ಶೆ 20ರಷ್ಟು ಪ್ರಾಧಾನ್ಯತೆ ನೀಡಲಿದ್ದೇವೆ. ಎರಡು ವೇದಿಕೆಗಳಲ್ಲಿ ಸಾಹಿತ್ಯ ಕುರಿತ ಚರ್ಚೆ, ಸಂವಾದಗಳು ನಡೆಯಲಿವೆ. ಸಂಜೆ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಪುಸ್ತಕ ಬಿಡುಗಡೆಗೂ ವೇದಿಕೆ ಕಲ್ಪಿಸುತ್ತೇವೆ’ ಎಂದು ಅವರು ತಿಳಿಸಿದರು.
ಪ್ರತಿಯೊಬ್ಬ ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಪುಸ್ತಕ ಖರೀದಿಸಿ ಕ್ಷೇತ್ರದ ಸರ್ಕಾರಿ ಶಾಲಾ ಕಾಲೇಜುಗಳಿಗೆ ಹಾಗೂ ಗ್ರಂಥಾಲಯಗಳಿಗೆ ಪೂರೈಸಲು ವಿಶೇಷ ಅವಕಾಶ ಕಲ್ಪಿಸಲಿದ್ದೇವೆ. ಯಾವ ಪುಸ್ತಕ ಬೇಕು ಎಂಬ ಬಗ್ಗೆ ಅವರು ಆಯಾ ಶಾಲಾ ಕಾಲೇಜುಗಳಿಂದ ಅಥವಾ ಗ್ರಂಥಾಲಯದವರಿಂದ ಸಲಹೆ ಪಡೆದು ಖರೀದಿಸಬಹುದು. ಕೆಲವು ಸರ್ಕಾರಿ ಕಾಲೇಜುಗಳಲ್ಲಿ ಹಾಗೂ ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳು ಲಭ್ಯ ಇರುವುದಿಲ್ಲ. ಈ ಕೊರತೆ ನೀಗಿಸಲು ಅವಕಾಶ ಸಿಗಲಿದೆ’ ಎಂದರು.
Previous Articleಬಿಜೆಪಿ ಅಧ್ಯಕ್ಷ ಹುದ್ದೆ ಬಗ್ಗೆ ವಿಜಯೇಂದ್ರ ಹೇಳಿದ್ದೇನು.
Next Article ಇವನು ಅಂತಿಂಥಾ ಕಳ್ಳನಲ್ಲ.