ಬೆಂಗಳೂರು,ಫೆ.3-
‘ಸಂಚಾರ ನಿಯಮ ಉಲ್ಲಂಘನೆ ದಂಡದ ಶೇ.50ರ ರಿಯಾಯಿತಿ ಮೊತ್ತವನ್ನು ಪರಿಶೀಲಿಸಿ ಪಾವತಿ ಮಾಡಲು ನಾಲ್ಕು ವಿಧಾನಗಳಿವೆ. ಬಾಕಿ ಇರುವ ದಂಡವನ್ನು ವೀಕ್ಷಿಸುವ ಮತ್ತು ಪಾವತಿಸಲು ಕರ್ನಾಟಕ ಒನ್ ವೆಬ್ಸೈಟ್ (Karnataka One Website) ನಲ್ಲಿ ವಿವರಗಳನ್ನು ಪಡೆದು ಪಾವತಿಸಬಹುದಾಗಿದೆ' ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
‘ಪೇಟಿಎಂ (Paytm) ಆಪ್ ಮುಖಾಂತರವೂ ಉಲ್ಲಂಘನೆಯ ವಿವರಗಳನ್ನು ಪಡೆದು ಪಾವತಿಸಬಹುದಾಗಿದೆ. ಅಲ್ಲದೇ ಹತ್ತಿರದ ಸಂಚಾರ ಪೊಲೀಸ್ ಠಾಣೆಗಳಲ್ಲಿ ನಿಮ್ಮ ವಾಹನದ ನೋಂದಣಿ ಸಂಖ್ಯೆಯ ವಿವರಗಳನ್ನು ಒದಗಿಸಿ, ದಂಡವನ್ನು ಪಾವತಿಸಿ, ರಶೀದಿಯನ್ನು ಪಡೆದುಕೊಳ್ಳಬಹುದು. ಸಂಚಾರ ನಿರ್ವಹಣಾ ಕೇಂದ್ರದ ಮೊದಲನೆ ಮಹಡಿಯಲ್ಲೂ ಪಾವತಿಸಬಹುದಾಗಿದೆ.
Paytm ನಲ್ಲಿ ಪಾವತಿ:
- Paytm ಆ್ಯಪ್ ಓಪನ್ ಮಾಡಿ, ಬಳಿಕ ರೀಚಾರ್ಜ್ ಮತ್ತು ಬಿಲ್ ಪೇಮೆಂಟ್ (Recharge and bill payments) ವಿಧಾನವನ್ನು ಆಯ್ಕೆ ಮಾಡಿಕೊಳ್ಳಿ.
- ಚಲನ್ (Challan) ಎಂಬ ಆಯ್ಕೆ ಕಾಣದಿದ್ದರೆ View more ಮೇಲೆ ಕ್ಲಿಕ್ ಮಾಡಿ.
- ನಂತರ ಟ್ರಾನ್ಸಿಟ್ (Transit) ವಿಧಾನ ಆಯ್ಕೆ ಮಾಡಿಕೊಂಡು, ಟ್ರಾಫಿಕ್ ಸಂಕೇತ ಇರುವ ಚಲನ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಇದಾದ ಬಳಿಕ ಬೆಂಗಳೂರು ಟ್ರಾಫಿಕ್ ಪೊಲೀಸ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ನಿಮ್ಮ ವಾಹನ ಸಂಖ್ಯೆಯನ್ನು ನಮೂದಿಸಿದರೆ ರಿಯಾಯಿತಿಯೊಂದಿಗೆ ನಿಮ್ಮ ದಂಡದ ಮೊತ್ತ ಕಾಣುತ್ತದೆ.
- ನಂತರ ದಂಡವನ್ನು ಪಾವತಿಸಿ.
ವಿನಾಯಿತಿ ನೀಡಿದ್ದೇಕೆ:
ಹೈಕೋರ್ಟ್ ನ್ಯಾಯಾಧೀಶರು ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ನ್ಯಾ. ಬಿ. ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ಜ.27ರಂದು ನಡೆದ ಸಭೆಯಲ್ಲಿ ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ಎಲ್ಲರಿಗೂ ನ್ಯಾಯ ಒದಗಿಸುವ ಸಲುವಾಗಿ ಬಾಕಿ ಇರುವ ಉಲ್ಲಂಘನೆ ದಂಡ ಪಾವತಿಗೆ ವಿನಾಯಿತಿ ನೀಡುವಂತೆ ಚರ್ಚೆ ನಡೆಸಿದ್ದರು. ಇದಕ್ಕೆ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಗ್ರೀನ್ ಸಿಗ್ನಲ್ ತೋರಿದ್ದರು.
ಇದರ ಮೇರೆಗೆ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯಾದ್ಯಂತ ಸಂಚಾರ ಪೊಲೀಸರು ದಾಖಲಿಸಿರುವ ಸಂಚಾರ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಬಗ್ಗೆ ಕಾನೂನು ಇಲಾಖೆ ಅಧಿಕಾರಿಗಳ ಒಪ್ಪಿಗೆ ಪಡೆದ ಸಾರಿಗೆ ಇಲಾಖೆ, ಶೇ.50 ವಿನಾಯಿತಿ ನೀಡಿದೆ. ಹಲವು ದಿನಗಳಿಂದ ಬಾಕಿ ಉಳಿಸಿಕೊಂಡಿರುವ ಸಂಚಾರ ದಂಡವನ್ನು ಫೆ.11ರ ಒಳಗೆ ಪಾವತಿಸಿದರೆ ಶೇ.50 ವಿನಾಯಿತಿ ಸಿಗಲಿದೆ.
ಬಾಕಿ ಇತ್ಯರ್ಥ:
‘ನಿಗದಿತ ದಿನಾಂಕದಂದು ಬಾಕಿ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳುವವರಿಗೆ ಮಾತ್ರ ಇದು ಅನ್ವಯ ಆಗಲಿದೆ. ಆನಂತರ ಬಂದವರಿಗೆ ವಿನಾಯಿತಿ ಸಿಗುವುದಿಲ್ಲ' ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗದಲ್ಲಿ ಹಲವು ವರ್ಷಗಳಿಂದ ಅಂದಾಜು 2 ಕೋಟಿ ಪ್ರಕರಣಗಳು ಬಾಕಿ ಉಳಿದಿವೆ. ರಾಜ್ಯ ಸರ್ಕಾರ ಕೊಟ್ಟಿರುವ ಅವಕಾಶವನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು. ಆನ್‌ಲೈನ್ ಅಥವಾ ಸಂಚಾರ ಪೊಲೀಸ್ ಠಾಣೆಯಲ್ಲಿ ದಂಡದ ಮೊತ್ತವನ್ನು ಪಾವತಿಸಿ ವಿನಾಯಿತಿ ಪಡೆಯವಂತೆ ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದ್ದಾರೆ.