ಬೆಂಗಳೂರು – ಉದ್ಯಾನ ನಗರಿ ಎಂಬ ಅನ್ವರ್ಥಕ್ಕೆ ತಕ್ಕಂತೆ ಬೆಂಗಳೂರು ಬೆಳೆಯಬೇಕು.ಭವಿಷ್ಯದ ಅಗತ್ಯಕ್ಕೆ ಅನುಗುಣವಾಗಿ ನಗರಕ್ಕೆ ಯೋಜಿತ ರೀತಿಯಲ್ಲಿ ಸೌಲಭ್ಯ ಕಲ್ಪಿಸುವುದು ತಮ್ಮ ಸಂಕಲ್ಪವಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬ್ರಾಂಡ್ ಬೆಂಗಳೂರು ಕುರಿತು ವರ್ಬ್ಯಾಟಲ್ ಏರ್ಪಡಿಸಿದ್ದ ವಿಶೇಷ ಚರ್ಚಾ ಸ್ಪರ್ಧೆಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಕ್ಕಳ ವಾದ ಸರಣಿ ಆಲಿಸಿದ ನಂತರ ಮಾತನಾಡಿದ ಅವರು ರೈತನ ಮಗನಾಗಿ ಜನಿಸಿದ ತಾನು ಉದ್ಯಮಿಯಾಗಿದ್ದೇನೆ, ರಾಜಕೀಯ ನನ್ನ ಆಸಕ್ತಿಯ ಕ್ಷೇತ್ರ,ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿ ನನ್ನ ಕನಸು ಎಂದು ಹೇಳಿದರು.
ಸಮಾಜದಲ್ಲಿ ಯಾರು ಬೇಕಾದರೂ ನಾಯಕರಾಗಬಹುದು.ವರ್ಬ್ಯಾಟಲ್ ಸಂಸ್ಥೆ ನಾಯಕರನ್ನು ಹುಟ್ಟು ಹಾಕುವ ಕೆಲಸ ಮಾಡುತ್ತಿದೆ.ನಾಯಕ ಎಂದರೆ,ಕೇವಲ ರಾಜಕೀಯ ಮಾತ್ರವಲ್ಲ ಆತನ ಆಸಕ್ತಿಯ ವಿಷಯದಲ್ಲಿ ನಾಯಕರಾಗಬೇಕು ಎಂದು ತಿಳಿಸಿದರು.
ನಾಡಪ್ರಭು ಕೆಂಪೇಗೌಡ ಅವರು ಕಟ್ಟಿದ ಬೆಂಗಳೂರಿಗೆ ಹೊಸ ರೂಪ ನೀಡುವ ಮಹತ್ವಾಕಾಂಕ್ಷೆ ಹೊಂದಿದ್ದೇನೆ. ಈ ವಿಚಾರವಾಗಿ ಎಲ್ಲಾ ವರ್ಗದ ಜನರ ಸಲಹೆ ಪಡೆಯುತ್ತಿದ್ದೇನೆ. ನಾವು ಭವಿಷ್ಯದ ಬೆಂಗಳೂರನ್ನು ಮುಂದಿನ ಪೀಳಿಗೆಗಾಗಿ ನಿರ್ಮಾಣ ಮಾಡಬೇಕು. ಇದಕ್ಕಾಗಿ, ಭವಿಷ್ಯದ ಬೆಂಗಳೂರನ್ನು ನಮ್ಮ ದೃಷ್ಟಿಕೋನಕ್ಕಿಂತ ಮಕ್ಕಳ ದೃಷ್ಟಿಕೋನದಲ್ಲಿ ನೋಡಬೇಕು. ಅದಕ್ಕಾಗಿ ಮಕ್ಕಳ ಸಲಹೆ ಪಡೆಯುತ್ತಿದ್ದೇನೆ. ಬೆಂಗಳೂರು ತನ್ನದೇ ಆದ ಇತಿಹಾಸ, ಪರಂಪರೆ ಹೊಂದಿದೆ ಎಂದು ಹೇಳಿದರು.
ಚರ್ಚಾ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಹಸಿರು ಬೆಂಗಳೂರಿನ ಕುರಿತು ಮಾತನಾಡಿದ್ದನ್ನು ಗಮನಿಸಿದೆ. ನಾನು ಸಚಿವನಾದ ನಂತರ ಪರಿಸರದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಆಗ ನಾನು, ಪಾಲಿಕೆಯು ಶಾಲಾ ಆಡಳಿತ ಜೊತೆ ಒಡಂಬಡಿಕೆ ಮಾಡಿಕೊಂಡು ನಗರದಲ್ಲಿ ಶಾಲಾ ಮಕ್ಕಳಿಂದ ಗಿಡ ನೆಡಿಸಿ ಅವುಗಳನ್ನು ಬೆಳೆಸುವ ಜವಾಬ್ದಾರಿ ಅವರಿಗೆ ನೀಡಬೇಕು. ಆ ಗಿಡ ಬೆಳೆಸುವ ಮಗುವಿಗೆ ಆ ಮರದ ಬಳಿ ಹೆಸರು ಹಾಕಿಕೊಳ್ಳುವ ಅವಕಾಶ ನೀಡಬೇಕು ಎಂದು ಅಧಿಕಾರಿಗಳೇ ಸೂಚನೆ ನೀಡಿದೆ. ಇಲ್ಲಿನ ಸಂಸ್ಕೃತಿ ಹಾಗೂ ವಾತಾವರಣ ನಮಗೆ ಹೊಂದಿಕೊಳ್ಳುವಂತಿದ್ದು, ನಾವು ಹಸಿರು ಬೆಂಗಳೂರನ್ನು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಬೆಂಗಳೂರಿಗೆ (Namma Bengaluru) ಹೊಸ ರೂಪ ನೀಡಲು 70 ಸಾವಿರಕ್ಕೂ ಹೆಚ್ಚಿನ ಸಲಹೆಗಳು ಬಂದಿವೆ. ಇವುಗಳ ಜತೆ ಯುವ ಪ್ರತಿಭೆಗಳ ಆಲೋಚನೆಗಳನ್ನು ಪಡೆಯಬೇಕಿದೆ. ಅವರು ಯಾವುದೇ ವೈಯಕ್ತಿಕ ಆಸಕ್ತಿ ಇಲ್ಲದೆ ಸಲಹೆ ನೀಡುತ್ತಾರೆ. ನಾಯಕರನ್ನು ಸೃಷ್ಟಿಸುವವನು ನಿಜವಾದ ನಾಯಕನೇ ಹೊರತು, ಹಿಂಬಾಲಿಕರನ್ನು ಸೃಷ್ಟಿಸುವವನಲ್ಲ ಎಂಬ ಮಾತಿದೆ. ನೀವುಗಳು ಕೂಡ ನೀವು ಆಯ್ಕೆ ಮಾಡಿಕೊಳ್ಳುವ ಕ್ಷೇತ್ರಗಳಲ್ಲಿ ನಾಯಕರಾಗಿ ಬೆಳೆಯಬೇಕು ಎಂದು ಬಯಸುತ್ತೇನೆ. ನೀವು ಸಧೃಡವಾಗಿ ಬೆಳೆದು, ಸಮಾಜಕ್ಕೆ ಕೊಡುಗೆ ನೀಡಬೇಕು. ಸಮಾಜಕ್ಕೆ ನೀವು ಏನು ಮಾಡುತ್ತೀರಿ ಎಂಬುದು ಮುಖ್ಯ ಎಂದು ಕಿವಿ ಮಾತು ಹೇಳಿದರು.
ಬೆಂಗಳೂರು ಪೂರ್ವ ನಿಯೋಜಿತ ನಗರವಲ್ಲ. ಇದಕ್ಕೆ ಹೊಸ ರೂಪ ನೀಡುವುದು ಸವಾಲಿನ ಕೆಲಸ. ಇದಕ್ಕಾಗಿ ನಾವು ನಿನ್ನೆ ಬೆಂಗಳೂರು ವಿನ್ಯಾಸಕ್ಕೆ ಅಂತಾರಾಷ್ಟ್ರೀಯ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ.ಇಲ್ಲಿನ ವಾತಾವರಣ ಹಾಗೂ ಸಂಸ್ಕೃತಿಗೆ ಮನಸೋತು ಹೆಚ್ಚಿನ ಸಮಯದಲ್ಲಿ ಬೆಂಗಳೂರಿಗೆ ಬಂದು ಮರಳಿ ತಮ್ಮ ಊರಿಗೆ ಹೋಗುವುದಿಲ್ಲ. ಬೆಂಗಳೂರು ಜ್ಞಾನ, ಶಿಕ್ಷಣ, ಮೆಡಿಕಲ್, ಐಟಿ ರಾಜಧಾನಿ ಆಗಿದೆ. ಇಲ್ಲಿ ಓದಿ ಬೆಳೆದವರು ವಿಶ್ವದ ಪ್ರಮುಖ ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ.ಇಲ್ಲಿ ಓದಿದ ಪ್ರತಿಭಾವಂತರು ಹೊರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಕೆಲವರು ಮಾತ್ರ ಇಲ್ಲೇ ಉಳಿಯುತ್ತಿದ್ದಾರೆ. ಕೆಲವೊಮ್ಮೆ ರಾಜಕಾರಣಿಗಳು ಹಾಗೂ ಐಎಎಸ್ ಅಧಿಕಾರಿಗಳಿಗಿಂತ ಮಕ್ಕಳು ಅತ್ಯುತ್ತಮ ಸಲಹೆಗಳನ್ನು ನೀಡುತ್ತಾರೆ. ಹೀಗಾಗಿ ನಾನು ನಿಮ್ಮ ಸಲಹೆ ಪಡೆಯುತ್ತಿದ್ದೇನೆ ಎಂದು ತಿಳಿಸಿದರು.
ಈ ವೇಳೆ ಯೋಜನಾ ಸಚಿವ ಡಿ.ಸುಧಾಕರ್,ಮಾಜಿ ಮಂತ್ರಿ ಪಿ.ಜಿ.ಆರ್.ಸಿಂಧ್ಯಾ,ಮಾಜಿ ಶಾಸಕ ಕೊಂಡಜ್ಜಿ ಮೋಹನ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಶೇಷ ಆಯುಕ್ತ ತುಷಾರ್ ಗಿರಿನಾಥ್ ಉಪಸ್ಥಿತರಿದ್ದರು