ಬೆಂಗಳೂರು,ಅ.3-
ಜೆಡಿಎಸ್ ನಾಯಕ ಹಾಗೂ ಕೇಂದ್ರ ಉಕ್ಕು ಸಚಿವ ಕುಮಾರಸ್ವಾಮಿ ವಿರುದ್ಧ ಇದೀಗ ಹಣಕ್ಕಾಗಿ ಬೆದರಿಕೆ ಹಾಕಿದ ಆರೋಪದಲ್ಲಿ ಪೊಲೀಸರಿಗೆ ದೂರು ಸಲ್ಲಿಕೆಯಾಗಿದೆ
ಐವತ್ತು ಕೋಟಿ ರೂಪಾಯಿ ನೀಡಬೇಕು ಇಲ್ಲವಾದರೆ ನಿಮಗೆ ಬೆಂಗಳೂರಿನಲ್ಲಿ ಇರಲು ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ಟಾಟಾ ಪೊಲೀಸರಿಗೆ ದೂರು ನೀಡಿದ್ದಾರೆ.
ಇವರು ನೀಡಿದ ದೂರು ಆಧರಿಸಿ ಕೇಂದ್ರ ಸಚಿವ
ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಗೌಡ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
ಜೆಡಿಎಸ್ ಮುಖಂಡ ರಮೇಶ್ ಗೌಡ ನಮ್ಮ ಮನೆಗೆ ಬಂದು ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಇದಕ್ಕೆ ನಿಮ್ಮ ಸಹಕಾರ ಬೇಕು ಎಂದಿದ್ದರು.
ಅದೇ ವೇಳೆ, ಕುಮಾರಸ್ವಾಮಿ ಕೂಡ ದೂರವಾಣಿ ಕರೆ ಮಾಡಿದರು. ನನ್ನ ಮಗ ಚುನಾವಣೆಗೆ ಸ್ಪರ್ಧಿಸುತ್ತಿದ್ದಾನೆ ಇದಕ್ಕೆ ನಿಮ್ಮ ಸಹಕಾರ ಬೇಕಾಗಿದೆ
ಚುನಾವಣೆಯ ಖರ್ಚಿಗಾಗಿ 50 ಕೋಟಿ ರೂಪಾಯಿ ಹಣ ನೀಡುವಂತೆ ನನ್ನನ್ನು ಕೇಳಿದ್ದರು. ನಾನು ಅಷ್ಟೊಂದು ಹಣ ಎಲ್ಲಿಂದ ತರಬೇಕು ನನ್ನ ಬಳಿ ಇಲ್ಲ ಹೀಗಾಗಿ ಹಣ ಕೊಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಹಣ ಕೊಡಲಾಗದು ಎಂದಿದ್ದಕ್ಕೆ ಕೋಪಿಸಿಕೊಂಡ
ಕುಮಾರಸ್ವಾಮಿ ಬೆಂಗಳೂರಿನಲ್ಲಿ ನೀವು ಹೇಗೆ ವ್ಯವಹಾರ ಮಾಡಲು ಸಾಧ್ಯ. ಹಣ ಕೊಡದೆ ಹೋದರೆ, ನಿಮ್ಮ ಯಾವುದೇ ಪ್ರಾಜೆಕ್ಟ್ ಕಂಪ್ಲೀಟ್ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದಷ್ಟೇ ಅಲ್ಲದೆ ವಿಧಾನಪರಿಷತ್ತಿನ ಮಾಜಿ ಸದಸ್ಯ ರಮೇಶ್ ಗೌಡ ಅವರು ತಮ್ಮ ಬಡಾವಣೆಯಲ್ಲಿ ತಾವು ದೇವಸ್ಥಾನವನ್ನು ನಿರ್ಮಾಣ ಮಾಡುತ್ತಿದ್ದೇನೆ ಈ ದೇವಸ್ಥಾನ ಕಟ್ಟಲು 5 ಕೋಟಿ ರೂಪಾಯಿ ದೇಣಿಗೆ ನೀಡುವಂತೆ ಕೇಳಿದ್ದರು.
ಆದರೆ ನಾನು ಈಗ ನನಗೆ ತುಂಬಾ ಕಷ್ಟವಿದೆ ನನ್ನ ಬಳಿ ಹಣ ಇಲ್ಲ ಹೀಗಾಗಿ ಯಾವುದೇ ಕಾರಣಕ್ಕೂ ಹಣ ಕೊಡಲ್ಲ ಅಂದಿದ್ದೆ. ಇದಕ್ಕೆ ಒಪ್ಪದ ಅವರು ಕಳೆದ ಒಂದು ವಾರದಿಂದ ಕಾಲ್ ಮತ್ತು ಮೆಸೇಜ್ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ
2019ರ ಚುನಾವಣೆಯಲ್ಲೂ ಅವರಿಗಾಗಿ ತುಂಬಾ ಖರ್ಚು ಮಾಡಿದ್ದೆವು ಎಂದು ವಿಜಯ್ ಟಾಟ ದೂರಿನಲ್ಲಿ ಹೇಳಿದ್ದಾರೆ
Previous Articleಸಿದ್ದರಾಮಯ್ಯ ಸರ್ಕಾರದ ಧ್ಯೇಯ.
Next Article ಗೆಲುವಿನ ವಿಶ್ವಾಸದಲ್ಲಿ ಕಾಂಗ್ರೆಸ್.