ಶಿವಮೊಗ್ಗ: ಸಮಾಜವಾದಿ ಚಿಂತಕ, ಲೇಖಕ, ಆಕಾಶವಾಣಿ ವಾರ್ತಾವಾಚಕ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಿ.ಎಸ್. ನಾಗಭೂಷಣ್ ಗುರುವಾರ (ಮೇ 19) ನಿಧನರಾದರು.
ಅವರಿಗೆ 70 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಅವರು ಅಸ್ವಸ್ಥರಾಗಿದ್ದರು. ಓದು, ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ಅವರು ತಮ್ಮ ಪತ್ನಿ ಸವಿತಾ ನಾಗಭೂಷಣ್ ಅವರೊಂದಿಗೆ ಶಿವಮೊಗ್ಗದಲ್ಲಿ ನೆಲೆಸಿದ್ದರು.
ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆಗೆ ಕಾರ್ಯನಿರ್ವಹಿಸಿದ್ದ ಅವರು, ನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿಯೂ 7 ವರ್ಷ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು.
ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಡಿ.ಎಸ್.ನಾಗಭೂಷಣ್ 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದ್ದರು.
ಅವರ ‘ಗಾಂಧಿ ಕಥನ’ ಕೃತಿಗೆ 2021ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿತ್ತು. ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯಪ್ರಕಾಶ ನಾರಾಯಣ ಒಂದು ಅಪೂರ್ಣ ಕ್ರಾಂತಿಯ ಕಥೆ’, ‘ನಮ್ಮ ಶಾಮಣ್ಣ’, ‘ಕನ್ನಡದ ಮನಸು ಮತ್ತು ಇತರ ಲೇಖನಗಳು’. ಹಾಗೂ ‘ಕಾಲಕ್ರಮ’, ‘ಗಮನ’, ‘ಅನೇಕ’, ‘ಈ ಭೂಮಿಯಿಂದ ಆ ಆಕಾಶದವರೆಗೆ’, ‘ಮರಳಿ ಬರಲಿದೆ ಸಮಾಜವಾದ’, ‘ವಸಿಷ್ಠರು ಮತ್ತು ವಾಲ್ಮೀಕಿಯರು’, ‘ಹಣತೆ’(ಜಿಎಸ್ಸೆಸ್ ಅಭಿನಂದನೆ ಗ್ರಂಥ) ಸೇರಿದಂತೆ ಹಲವು ಮಹತ್ವದ ಕೃತಿಗಳನ್ನು ರಚಿಸಿದ್ದರು
Previous Articleಮುತಾಲಿಕ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
Next Article Red alert ಶಾಲೆಗೆ ರಜೆ!