ಬೆಂಗಳೂರು.
ವಯನಾಡು ಮತ್ತು ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಅರಣ್ಯ ಪ್ರದೇಶದಲ್ಲಿನ ಒತ್ತುವರಿಯನ್ನು ಮುಲಾಜಿಲ್ಲದೆ ತೆರವುಗೊಳಿಸಲು ಸೂಚನೆ ನೀಡಿದೆ.
ರಾಜ್ಯದ 10 ಜಿಲ್ಲೆಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟ ಮತ್ತು ಇತರ ಘಟ್ಟ ಪ್ರದೇಶಗಳಲ್ಲಿ 2015ರ ನಂತರದ ಅರಣ್ಯ ಒತ್ತುವರಿ ತೆರವುಗೊಳಿಸಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥರ ನೇತೃತ್ವದ ಕಾರ್ಯಪಡೆ ರಚಿಸಲಾಗಿದೆ
ಈ ಕಾರ್ಯಪಡೆಗೆ ಮೊದಲಿಗೆ ಅರಣ್ಯ ಭೂಮಿ ಒತ್ತುವರಿ ಮಾಡಿ ನಿರ್ಮಿಸಿರುವ ರೆಸಾರ್ಟ್ ಗಳು, ಹೋಂಸ್ಟೇಗಳನ್ನು ಹಾಗೂ ಕರ್ನಾಟಕ ಅರಣ್ಯ ಕಾಯಿದೆ ಕಾಲಂ 64ಎ ಪ್ರಕಾರ ಪ್ರಕ್ರಿಯೆ ಪೂರ್ಣಗೊಂಡಿರುವ ಮತ್ತು ನ್ಯಾಯಾಲಯದ ತಡೆಯಾಜ್ಞೆ, ವಿಚಾರಣೆ ಬಾಕಿ ಇಲ್ಲದ ದೊಡ್ಡ ಒತ್ತುವರಿಗಳನ್ನು ತೆರವು ಮಾಡಲು ಸೂಚಿಸಲಾಗಿದೆ.
ಒಂದು ತಿಂಗಳ ಹಿಂದೆ ಈ ಆದೇಶ ಹೊರಡಿಸಿದ್ದು ಇಲ್ಲಿಯವರೆಗೆ ತೆರವು ಮಾಡಲಾದ ಆಸ್ತಿಗಳ ಕುರಿತಂತೆ ಫೋಟೋ ಸಮೇತ ವಿವರವಾದ ವರದಿ ಸಲ್ಲಿಸಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಒತ್ತುವರಿ ತೆರವಿನ ಸಮಯದಲ್ಲಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿರುವ ರೆಸಾರ್ಟ್ ಹೋಟೆಲ್ ಮತ್ತು ಹೋಂ ಸ್ಟೇ ಗಳನ್ನು ಮುಲಾಜಿಲ್ಲದೆ ತೆರವುಗೊಳಿಸಬೇಕು ಪಾರಂಪರಿಕ ಅರಣ್ಯ ಕಾಯ್ದೆ ಅನ್ವಯ ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿರುವ ಪ್ರಕರಣಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ತಿಳಿಸಿದ್ದಾರೆ.
ಕೃಷಿ ಉದ್ದೇಶಕ್ಕಾಗಿ 3 ಎಕರೆ ಒಳಗಿನ ಒತ್ತುವರಿಯ ಬಗ್ಗೆ ತಕ್ಷಣಕ್ಕೆ ಕ್ರಮ ಕೈಗೊಳ್ಳಬಾರದು ಇದನ್ನು ಮೇಲ್ಪಟ್ಟು ಮಾಡಲಾಗಿರುವ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಹೇಳಿದ್ದಾರೆ.
Previous Articleಮಾಜಿ ಸಿಎಂಗೆ ಮತ್ತೊಂದು ಕಂಟಕ.
Next Article ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ಏನಾಗುತ್ತಿದೆ ಗೊತ್ತಾ.