ಭಾರತೀಯ ಚಿತ್ರರಂಗ ಮತ್ತೊಬ್ಬ ಅಮೂಲ್ಯ ವ್ಯಕ್ತಿಯನ್ನು ಕಳೆದುಕೊಂಡಿದೆ. ತೆಲುಗು ಚಿತ್ರರಂಗದ ಹಿರಿಯ ನಿರ್ದೇಶಕ, “ಕಲಾ ತಪಸ್ವಿ” ಬಿರುದಾಂಕಿತ ನಿರ್ದೇಶಕ ಶ್ರೀ ಕೆ. ವಿಶ್ವನಾಥ್ (K. Vishwanath) ಅವರು ಫೆಬ್ರವರಿ 2, 2023 ರಂದು ನಮ್ಮನ್ನಗಲಿದ್ದಾರೆ. 92 ರ ಹರೆಯದಲ್ಲಿದ್ದ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ (Apollo Hospitals Hyderabad) ಚಿಕಿತ್ಸೆ ಪಡೆಯುತ್ತಿದ್ದ ಅವರು, ಕಾಲನ ಕರೆಗೆ ಓಗೊಟ್ಟು ಇಹಲೋಕವನ್ನು ತ್ಯಜಿಸಿದ್ದಾರೆ.
1951 ರಲ್ಲಿ ಪಾತಾಳ ಭೈರವಿ ಎಂಬ ತೆಲುಗು-ತಮಿಳು ಚಲನಚಿತ್ರದ ಸಹಾಯಕ ನಿರ್ದೇಶಕರಾಗಿ ಚಿತ್ರರಂಗವನ್ನು ಪ್ರೆವೇಶಿಸಿದರು. ನಂತರ 1965 ರಲ್ಲಿ ಮೊಟ್ಟ ಮೊದಲ ಬಾರಿಗೆ ನಿರ್ದೇಶಕರಾಗಿ ‘ಆತ್ಮ ಗೌರವಮ್’ ಎಂಬ ಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರಕ್ಕೆ ಪ್ರತಿಷ್ಠಿತ “ನಂದಿ ಪ್ರಶಸ್ತಿ” ಯನ್ನೂ ಗೆದ್ದರು. ಶಂಕರಾಭರಣಂ, ಸಪ್ತಪದಿ, ಸಿರಿಸಿರಿಮುವ್ವ, ಸಾಗರಸಂಗಮಮ್, ಸ್ವಾತಿಮುತ್ಯಂ ಸೇರಿದಂತೆ 50 ಕ್ಕೂ ಹೆಚ್ಚು ಅದ್ಭುತ ಚಿತ್ರಗಳ ಕೊಡುಗೆಯನ್ನು ನೀಡಿದ್ದಾರೆ. 1995ರಲ್ಲಿ “ಶುಭಸಂಕಲ್ಪಮ್” ಎನ್ನುವ ಚಿತ್ರದಲ್ಲಿ ಅಭಿನಯಿಸುವ ಮೊದಲ ಬಾರಿಗೆ ನಟರಾಗಿ ಕಾಣಿಸಿಕೊಂಡರು.
1992 ರಲ್ಲಿ ಪದ್ಮಶ್ರೀ ಪ್ರಶಸ್ತಿ, 2016 ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, 8 ಬಾರಿ ಪ್ರತಿಷ್ಠಿತ ನಂದಿ ಪ್ರಶಸ್ತಿ, ಹಲವು ಫಿಲ್ಮ್ ಫೇರ್ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಪೂರ್ಣೋದಯ ಮೂವೀ ಕ್ರಿಯೇಷನ್ಸ್ (Poornodaya Movie Creations) ನಿರ್ಮಿಸಿದ ಅವರ ನಿರ್ದೇಶನದ ಕೃತಿಗಳನ್ನು ಮಾಸ್ಕೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (Moscow International Film Festival ) ವಿಶೇಷ ಉಲ್ಲೇಖಕ್ಕಾಗಿ ಪ್ರದರ್ಶಿಸಲಾಗಿತ್ತು. ಅಲ್ಲದೆ, ಅಂತಹ ಚಲನಚಿತ್ರಗಳನ್ನು ರಷ್ಯನ್ ಭಾಷೆಗೆ ಡಬ್ ಮಾಡಲಾಗಿತ್ತು ಮತ್ತು ಮಾಸ್ಕೋದ ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲಾಗಿತ್ತು.
ಇವರು ನಿರ್ದೇಶಿಸಿದ “ಸ್ವಾತಿಮುತ್ಯಂ” ಚಿತ್ರವನ್ನು ಕನ್ನಡದಲ್ಲೂ ರಿಮೇಕ್ ಮಾಡಲಾಗಿದೆ. ಕಿಚ್ಚ ಸುದೀಪ್ (Sudeep) ಹಾಗೂ ಮೀನಾ (Meena) ಅಭಿನಯದ “ಸ್ವಾತಿಮುತ್ತು” ಸಿನಿಮಾ, ತನ್ನ ವಿಭಿನ್ನ ಚಿತ್ರಕಥೆ, ಸುಮಧುರ ಸಂಗೀತ, ಕಲಾವಿದರ ಅಮೋಘ ಅಭಿನಯದಿಂದ ಸಿನಿಪ್ರಿಯರ ಮನ ಗೆದ್ದಿತ್ತು. ತೆಲುಗು ಮಾತ್ರವಲ್ಲದೆ, ಹಿಂದಿ ಸಿನಿಮಾಗಳನ್ನೂ ನಿರ್ದೇಶಿಸಿದ ಖ್ಯಾತಿ ಅವರದ್ದು. ನಿರ್ದೇಶನದ ‘ಗುರು’ ಎಂದೇ ಪ್ರಖ್ಯಾತಿ ಪಡೆದಿದ್ದರು. ಭಾರತೀಯ ಚಿತ್ರರಂಗ “ಕಲಾ ತಪಸ್ವಿ”ಯ ಅಗಲಿಕೆಗೆ ಸಂತಾಪ ಸೂಚಿಸಿದೆ.