ಬೆಂಗಳೂರು,ಫೆ.19:
ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ಫಲಾನುಭವಿಗೆ ಹೆಚ್ಚುವರಿ ಅಕ್ಕಿಯ ಬದಲಿಗೆ ಹಣ ನೀಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಬದಲಾಯಿಸಿದೆ.
ಇದೀಗ ಹಣದ ಬದಲಿಗೆ ಪ್ರತಿಫಲಾನುಭವಿಗೆ ಮಾಸಿಕ ಹತ್ತು ಕಿಲೋ ಅಕ್ಕಿ ವಿತರಿಸಲಾಗುವುದು ಎಂದು ಆಹಾರ ಮಂತ್ರಿ ಕೆಎಚ್ ಮುನಿಯಪ್ಪ ಪ್ರಕಟಿಸಿದ್ದಾರೆ.
ಪ್ರತಿ ಫಲಾನುಭವಿಗೆ ವಿತರಿಸಲು ಸಾಕಾಗುವಷ್ಟು ಅಕ್ಕಿಯ ಲಭ್ಯತೆ ಇರುವ ಹಿನ್ನೆಲೆಯಲ್ಲಿ ಕಳೆದ 2023ರ ಜುಲೈನಿಂದ ಫಲಾನುಭವಿಗಳ ಖಾತೆಗೆ ₹
170 ರೂಪಾಯಿ ಜಮೆ ಮಾಡುವ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ ಎಂದು ಹೇಳಿದರು.
ನವೆಂಬರ್, ಡಿಸೆಂಬರ್ ಬಾಕಿಯನ್ನು ಖಾತೆಗೆ ಜಮೆ ಮಾಡಲು ನಿರ್ಧರಿಸಲಾಗಿದ್ದು, ಜನವರಿಯಲ್ಲಿ ನೀಡಬೇಕಿದ್ದ ಹಣಕ್ಕೆ ಬದಲಾಗಿ ಫೆಬ್ರುವರಿ ಪಡಿತರದಲ್ಲಿ 5 ಕೆ.ಜಿ. ಹೆಚ್ಚುವರಿ ಅಕ್ಕಿ ನೀಡುತ್ತಿದೆ. ಅಂದರೆ ಇದೊಂದು ತಿಂಗಳು ಪಡಿತರದಾರರಿಗೆ 15 ಕೆ.ಜಿ. ಅಕ್ಕಿ ದೊರೆಯಲಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಕೆ.ಜಿ.ಗೆ 22 ರೂಪಾಯಿ 50 ಪೈಸೆಯ ದರಕ್ಕೆ ಅಕ್ಕಿ ಸರಬರಾಜು ಮಾಡಲು ಒಪ್ಪಿಗೆ ನೀಡಿದೆ ಇದರಿಂದ ರಾಜ್ಯ ಸರ್ಕಾರಕ್ಕೆ ಪ್ರತಿ ತಿಂಗಳು ಸುಮಾರು 190 ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂದು ವಿವರಿಸಿದರು
ಕಳೆದ ಒಂದೂವರೆ ವರ್ಷದ ಹಿಂದೆ ಅನ್ನಭಾಗ್ಯ ಯೋಜನೆ ಆರಂಭಿಸಿದಾಗ ರಾಜ್ಯ ಸರ್ಕಾರ ಪ್ರತಿ ಕಿರು ಅಕ್ಕಿಗೆ 34 ರೂಪಾಯಿ ನೀಡಲು ಸಿದ್ಧವಿದ್ದರೂ, ಅಗತ್ಯ ಅಕ್ಕಿ ದೊರೆತಿರಲಿಲ್ಲ. ಹಾಗಾಗಿ, ಅಷ್ಟೇ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು. ಈಗ 22.50 ದರದಂತೆ ಅಕ್ಕಿ ಖರೀದಿಸಿ ಪೂರೈಸುವುದರಿಂದ ರಾಜ್ಯ ಸರ್ಕಾರಕ್ಕೆ ದೊಡ್ಡ ಮೊತ್ತದ ಹಣ ಉಳಿತಾಯವಾಗಲಿದೆ ಎಂದು ತಿಳಿಸಿದರು
Previous Articleಮುಡಾ ಹಗರಣ ತನಿಖೆಗೆ ಯೋಗ್ಯವಲ್ಲ
Next Article ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಹ್ಯಾಟ್ರಿಕ್ ಹೀರೋ