ಹಾಸನ,ಜ.18- ಚನ್ನರಾಯಪಟ್ಟಣದ ಮರುವನಹಳ್ಳಿ-ಮಡಬ ರಸ್ತೆಯಲ್ಲಿ ನಡೆದಿದ್ದ ವ್ಯಕ್ತಿಯ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಪ್ರಿಯಕರನೊಂದಿಗೆ ಸೇರಿ ಸುಪಾರಿ ಕೊಟ್ಟು ಕೃತ್ಯ ನಡೆಸಿದ್ದ ಪತ್ನಿಯನ್ನು ಬಂಧಿಸಿದ್ದಾರೆ.
ಮರುವನಹಳ್ಳಿ-ಮಡಬ ರಸ್ತೆಯಲ್ಲಿ ನಿನ್ನೆ ನಂಜುಂಡೇಗೌಡ ಕೊಲೆಯಾಗಿತ್ತು. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದಾಗ, ಗ್ರಾಮಸ್ಥರು ನಂಜುಂಡೇಗೌಡರ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ಮೃತನ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆಯ ಕಾರಣ ಬಯಲಾಗಿದೆ.
14 ವರ್ಷಗಳ ಹಿಂದೆ ನಂಜುಂಡೇಗೌಡರ ಮದುವೆಯಾಗಿತ್ತು. ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಜೊತೆ ಕುಂಬಾರಹಳ್ಳಿಯಲ್ಲಿ ಅವರು ವಾಸವಿದ್ದರು. ಮದುವೆಯಾಗಿ ಮೂರು ವರ್ಷದವರೆಗೂ ಪತಿ ಜೊತೆ ಚೆನ್ನಾಗಿದ್ದ ಮಹಿಳೆ, ನಂತರ ಎದುರು ಮನೆಯ ಅರುಣ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಳು.
ಅರುಣ್‌ಗೆ ಇಬ್ಬರು ಮಕ್ಕಳಿದ್ದು, ಪತ್ನಿಯಿಂದ ದೂರವಿದ್ದ.ಈ ಹಿಂದೆ ಮಹಿಳೆ ಹಾಗೂ ಅರುಣ್ ಅಕ್ರಮ ಸಂಬಧದ ವಿಚಾರವಾಗಿ ನಂಜುಂಡೇಗೌಡ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ರಾಜಿ – ಪಂಚಾಯ್ತಿ ನಡೆಸಿ ಹೊಂದಿಕೊಂಡು ಹೋಗುವಂತೆ ಕುಟುಂಬಸ್ಥರು ತಿಳುವಳಿಕೆ ಹೇಳಿದ್ದರು. ಅಲ್ಲದೇ ಅಕ್ರಮ ಸಂಬಂಧಕ್ಕೆ ಯಾರೂ ಅಡ್ಡಿ ಬರಬಾರದೆಂದು ಪತಿಯನ್ನು ಅವರ ಸಂಬಂಧಿಕರಿಂದ ಮಹಿಳೆ ದೂರ ಮಾಡಿದ್ದಳು. ಆದರೆ ಎರಡು ಹೆಣ್ಣುಮಕ್ಕಳಿಗಾಗಿ ನಂಜುಂಡೇಗೌಡ ಎಲ್ಲವನ್ನು ಸಹಿಸಿಕೊಂಡಿದ್ದರು.
ಕೆಲ ದಿನಗಳ ಹಿಂದೆ ಎರಡು ಬಾರಿ ನಂಜುಂಡೇಗೌಡರ ಮೇಲೆ ಅರುಣ್ ಮತ್ತು ಆತನ ಗ್ಯಾಂಗ್ ದಾಳಿ ಮಾಡಿತ್ತು. ಈ ವೇಳೆ ಅದೃಷ್ಟವಶಾತ್ ಬಚಾವಾಗಿದ್ದರು. ಮೂರನೇ ಬಾರಿ ವಿಫಲವಾಗಬಾರದು ಎಂದು ಮೂರು ಕಡೆ ಕೊಲೆ ಮಾಡಲು ಹಂತಕರು ಸಂಚು ರೂಪಿಸಿದ್ದರು. ಅದರಂತೆ ಬ್ಯಾಡರಹಳ್ಳಿಗೆ ಹೋಗುವ ರಸ್ತೆ ಮಧ್ಯೆಯಿರುವ ಬಾರೆಯ ಬಳಿ ಮರದಪಟ್ಟಿಗೆ ಉದ್ದವಾದ 50ಕ್ಕೂ ಹೆಚ್ಚು ಮೊಳೆ ಹೊಡೆದು, ಹುಲ್ಲಿನಿಂದ ಮುಚ್ಚಿ ವಾಹನ ಪಂಚರ್ ಮಾಡಿದ್ದರು. ಪಂಚರ್ ಆದ ವಾಹನದಿಂದ ಇಳಿಯುತ್ತಿದ್ದಂತೆ ಕಣ್ಣಿಗೆ ಖಾರದ ಪುಡಿ ಎರಚಿ ಲಾಂಗ್‌ನಿಂದ ದಾಳಿ ನಡೆಸಿ ಹತ್ಯೆಗೈದಿದ್ದರು. ಹತ್ಯೆಯ ವಿಚಾರ ಮಹಿಳೆಗೆ ತಿಳಿಯುತ್ತಿದ್ದಂತೆ ಅರ್ಧ ಗಂಟೆ ಮೂರ್ಛೆ ಹೋದಂತೆ ನಟಿಸಿದ್ದಳು.
ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ