ನವದೆಹಲಿ – ಬಿಂದೇಶ್ವರ ಪಾಠಕ್ (Bindeshwar Pathak) ಒಬ್ಬ ಅಪರೂಪದ ಸಾಧಕ.
ಭಾರತೀಯ ಸಮಾಜದಲ್ಲಿ ನಾಗರಿಕತೆಯ ನೈಜ ಕಲ್ಪನೆಗಳನ್ನು ಬಿತ್ತಿ ಆ ಕಲ್ಪನೆಗಳನ್ನು ಸಾಕಾರಗೊಳಿಸಿ, ಕಾರ್ಯರೂಪಕ್ಕೆ ತಂದು, ನಿರ್ಮಲ ಭಾರತ ನಿರ್ಮಾಣದ ಹೆಜ್ಜೆಗಳಲ್ಲಿ ದಾಪುಗಾಲನ್ನು ಇರಿಸಿದ ದಾರ್ಶನಿಕ.
ದೇಶದಾದ್ಯಂತ ಕಾಣ ಸಿಗುವ ಸುಲಭ ಶೌಚಾಲಯಗಳ ಸಂಸ್ಥಾಪಕ ಬ್ರಾಹ್ಮಣ ಸಮುದಾಯದಲ್ಲಿ ಜನಿಸಿ,ಮಹಾತ್ಮ ಗಾಂಧಿ ಅವರ ತತ್ವಗಳ ಪರಿಪಾಲಕರಾದ ಬಿಂದೇಶ್ವರ್ ಪಾಠಕ್ ಮಹಾತ್ಮ ಗಾಂಧಿ ಅವರಂತೆ ಸ್ವಚ್ಚತೆಯೇ ದೇವರೆಂದು ತಿಳಿದು ಅದನ್ನು ಅಕ್ಷರಶಃ ಪರಿ ಪಾಲಿಸಿದರು.
ಬಯಲು ಶೌಚಾಲಯ ಸಮಾಜಕ್ಕೆ ಅಂಟಿದ ಶಾಪ ಎಂದು ತಿಳಿದು,ಅದರ ನಿರ್ಮೂಲನೆಗೆ ಶ್ರಮಿಸಿದರು. ಇದಕ್ಕಾಗಿ ಸುಲಭ ಶೌಚಾಲಯ ಎಂಬ ವ್ಯವಸ್ಥೆಯನ್ನು ರೂಪಿಸಿ,ಇಡೀ ದೇಶಾದ್ಯಂತ ಈ ಜಾಲ ಹರಡುವಂತೆ ಮಾಡಿದರು.
ರಾಷ್ಟ್ರದಲ್ಲಿ 1970ರ ದಶಕದಿಂದ ಆರಂಭಗೊಂಡು ಇಲ್ಲಿಯವರೆಗೆ 5.4 ಕೋಟಿ ಶೌಚಾಲಯಗಳನ್ನು ನಿರ್ಮಿಸಿ ಕ್ರಾಂತಿ ಮಾಡಿದ ಬಿಂಧೇಶ್ವರ ಪಾಠಕ್ ಇನ್ನು ಭಾರತೀಯ ಜನಮಾನಸದಲ್ಲಿ ಅಜರಾಮರರಾಗಿ ಸ್ಮರಣೆಯಲ್ಲಿ ಉಳಿಯಲಿದ್ದಾರೆ.
ಸ್ವತಂತ್ರ ದಿನೋತ್ಸವದಲ್ಲಿ ಪಾಲ್ಗೊಂಡಿದ್ದ ಅವರು ತೀವ್ರ ಹೃದಯಾಘಾತದಿಂದ ಕಾಲನ ಗರ್ಭ ಸೇರಿದ್ದಾರೆ. ಆದರೆ ಅವರು ರೂಪಿಸಿದ ವ್ಯವಸ್ಥೆ ತಲೆ ತಲಾಂತರದವರೆಗೂ ಮುಂದುವರೆಯಲಿದೆ.
ಕರ್ನಾಟಕದಲ್ಲಿ ನಡೆದ ಬಯಲು ಶೌಚಾಲಯ ಮುಕ್ತ ಆಂದೋಲನಕ್ಕೆ ಬಿಂದೇಶ್ವರ್ ಪಾಠಕ್ ಪ್ರೇರಣೆ. ಇವರ ಸಲಹೆ ಸಹಕಾರದಿಂದ ಕರ್ನಾಟಕದಲ್ಲಿ 2013 ರಿಂದ 2014ರ ಅವಧಿಯಲ್ಲಿ ಒಂದೇ ವರ್ಷದಲ್ಲಿ 11 ಲಕ್ಷ ಗ್ರಾಮೀಣ ಶೌಚಾಲಯಗಳ ನಿರ್ಮಾಣ ಮಾಡಲಾಗಿತ್ತು ಇದನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದ ಪಾಠಕ್ ನಿರ್ಮಲ ಕರ್ನಾಟಕದ ಪೂರ್ಣ ಅವಶ್ಯಕ ವೈಯಕ್ತಿಕ ಶೌಚಾಲಯಗಳು ಬೇಗ ಪೂರ್ಣಗೊಳ್ಳಲಿ ಎಂದು ಹಾರೈಸಿದ್ದರು.
Latest Kannada News at Varthachakra.com