ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಸಿಲುಕಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ಇದೀಗ ತಮ್ಮದೇ ಶೈಲಿಯಲ್ಲಿ ವಿರೋಧಿಗಳಿಗೆ ಸೆಡ್ಡು ಹೊಡೆಯಲು ತೀರ್ಮಾನಿಸಿದ್ದಾರೆ.
ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ತಮ್ಮ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರೂ, ಸೊಪ್ಪು ಹಾಕದ ಈಶ್ವರಪ್ಪ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು.
ಇವರನ್ನು ಸಂಪರ್ಕಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬೆಳವಣಿಗೆಯಿಂದ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರವಾದಂತಾಗಿದೆ. ಹೀಗಾಗಿ ತಾವು ರಾಜೀನಾಮೆ ನೀಡುವುದು ಸೂಕ್ತ ಎಂದು ಹೇಳಿ ಈ ವಿಷಯದ ಬಗ್ಗೆ ಮಾತನಾಡಲು ಬೆಂಗಳೂರಿಗೆ ಬರುವಂತೆ ಸೂಚಿಸಿದ್ದರು.
ಆದರೆ, ಇದಕ್ಕೆ ಸೊಪ್ಪು ಹಾಕದ ಈಶ್ವರಪ್ಪ ಇದರಲ್ಲಿ ತಾವು ಯಾವುದೇ ತಪ್ಪು ಮಾಡಿಲ್ಲ ಅಲ್ಲದೆ, ತಮ್ಮ ವಿರುದ್ಧ ಯಾವುದೇ ದಾಖಲೆಗಳೂ ಇಲ್ಲ, ಕಾಂಗ್ರೆಸ್ ಈ ವಿಷಯವನ್ನು ರಾಜಕೀಯಕ್ಕೆ ಬಳಕೆ ಮಾಡಲು ಪ್ರಯತ್ನ ನಡೆಸಿದೆ ಇದನ್ನು ರಾಜಕೀಯವಾಗಿಯೇ ಎದುರಿಸಬೇಕು. ಅದಕ್ಕಾಗಿ ತಮ್ಮ ಬಳಿ ಎಲ್ಲಾ ಅಸ್ತ್ರಗಳಿವೆ, ಎದುರಿಸುತ್ತೇನೆ. ಇದಕ್ಕಾಗಿ ಯಾಕೆ ರಾಜೀನಾಮೆ ಕೊಡಬೇಕು? ಎಂದು ಪ್ರಶ್ನಿಸಿ ರಾಜೀನಾಮೆ ಕೊಡಲು ನಿರಾಕರಿಸಿದ್ದಷ್ಟೇ ಅಲ್ಲ ಮುಖ್ಯಮಂತ್ರಿಗಳನ್ನೂ ಭೇಟಿ ಮಾಡಲಿಲ್ಲ.
ಕಾಂಗ್ರೆಸ್ ವಿರುದ್ಧ ಪ್ರತಿ ರಾಜಕೀಯ ಹೋರಾಟಕ್ಕೆ ನಿರ್ಧರಿಸಿದ ಅವರು ಇದರ ಕಾರ್ಯತಂತ್ರ ರೂಪಿಸಲು ಶಿವಮೊಗ್ಗಕ್ಕೆ ತೆರಳಿದರು. ಈ ವೇಳೆ ತಮ್ಮನ್ನು ಸಂಪರ್ಕಿಸಿದ ಪಕ್ಷದ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರಿಗೂ ತಮ್ಮ ನಿಲುವು ತಿಳಿಸಿದ ಈಶ್ವರಪ್ಪ ತಾವು ರಾಜೀನಾಮೆ ನೀಡಿದರೆ ಕಾಂಗ್ರೆಸ್ ಮಾಡುತ್ತಿರುವ ಆರೋಪ ಒಪ್ಪಿಕೊಂಡಂತಾಗುತ್ತದೆ.
ಯಾವುದೇ ತಪ್ಪು ಮಾಡದೆ ಶಿಕ್ಷೆ ಯಾಕೆ ಅನುಭವಿಸಬೇಕು ಎಲ್ಲವನ್ನೂ ರಾಜಕೀಯವಾಗಿ ಎದುರಿಸುತ್ತೇನೆ ಎಂದು ಸಮಜಾಯಿಷಿ ನೀಡಿದರೆನ್ನಲಾಗಿದೆ.
ಈಶ್ವರಪ್ಪ ಅವರ ಈ ಸಮರ್ಥನೆಗೆ ವರಿಷ್ಟರೂ ಕೂಡಾ ಸಮ್ಮತಿಸಿ ರಾಜೀನಾಮೆ ವಿಷಯ ಅಲ್ಲಿಗೆ ಮುಗಿಸುವ ಸಿದ್ದತೆಯಲ್ಲಿದ್ದರೆಂದು ಗೊತ್ತಾಗಿದೆ. ಈ ನಡುವೆ ಬಿಜೆಪಿ ಯುವ ನಾಯಕರೊಬ್ಬರು ಮಧ್ಯ ಪ್ರವೇಶಿಸಿ, ಇಡೀ ಬೆಳವಣಿಗೆಗೆ ರೋಚಕ ತಿರುವು ನೀಡಿರುವುದಾಗಿ ಬಿಜೆಪಿಯ ಮೂಲಗಳು ತಿಳಿಸಿವೆ.
ಶಿವಮೊಗ್ಗ ರಾಜಕಾರಣದಲ್ಲಿ ಹಿಡಿತ ಸಾಧಿಸುವ ಮೂಲಕ ರಾಜ್ಯ ಮಟ್ಟದಲ್ಲಿ ಪ್ರಭಾವಿಯಾಗಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿರುವ ಈ ಯುವ ನಾಯಕ ಈಶ್ವರಪ್ಪ ಶಿವಮೊಗ್ಗದಲ್ಲಿ ಪ್ರಭಾವಿಯಾಗಿರುವಷ್ಟು ಕಾಲ ತಾವು ಎನು ಮಾಡಲು ಸಾಧ್ಯವಿಲ್ಲ ಎಂದು ಭಾವಿಸಿ ಈ ಪ್ರಕರಣವನ್ನು ಬಳಕೆ ಮಾಡಿದರೆನ್ನಲಾಗಿದೆ.
ಹೈಕಮಾಂಡ್ ಮಟ್ಟದಲ್ಲಿ ತಮಗಿರುವ ಪ್ರಭಾವ ಬಳಸಿದ ಈ ನಾಯಕ, ಸಂಘಟನಾ ಕಾರ್ಯದರ್ಶಿ ವರಿಷ್ಟರಿಗೆ ವಿವರ ನೀಡುವ ಮುನ್ನವೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮೂಲಕ ಪ್ರಕರಣದಲ್ಲಿ ಈಶ್ವರಪ್ಪ ತಪ್ಪಿತಸ್ಥರು ಎಂಬರ್ಥದ ವಿವರ ಮುಟ್ಟಿಸುವಲ್ಲಿ ಯಶಸ್ವಿಯಾಗುತ್ತಾರೆ. ಅಷ್ಟೇ ಅಲ್ಲ ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆಯುತ್ತೇವೆ ಎಂದು ಅರುಣ್ ಸಿಂಗ್ ಬಹಿರಂಗ ಹೇಳಿಕೆ ಕೊಡುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ.
ಈ ಎಲ್ಲಾ ಮಾಹಿತಿ ಪಡೆದ ಈಶ್ವರಪ್ಪ ಒತ್ತಡಕ್ಕೆ ಮಣಿದು ರಾಜೀನಾಮೆ ಕೊಟ್ಟರೂ ಅದಕ್ಕೂ ಮುನ್ನ ಅವರು ನಡೆಸಿದ ಚಟುವಟಿಕೆ ಹಾಗು ರಾಜೀನಾಮೆ ನಂತರ ನಡೆಸುತ್ತಿರುವ ವಿದ್ಯಮಾನ ಇದೀಗ ಪಕ್ಷದ ನಾಯಕತ್ವಕ್ಕೆ ಸವಾಲಾಗಿ ಪರಿಣಮಿಸಿದೆ.
ರಾಜೀನಾಮೆಗೂ ಮುನ್ನ ಶಿವಮೊಗ್ಗದಲ್ಲಿ ತಮ್ಮ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಸರಣಿ ಸಭೆ ನಡೆಸಿದ ಅವರು ಪಕ್ಷದ ಕಚೇರಿಯಲ್ಲೇ ಹೋಮ ಹವನ ನೆರವೇರಿಸುವ ಮೂಲಕ ಸಂದೇಶವೊಂದನ್ನು ರವಾನಿಸಿದರು. ಈ ವೇಳೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಮಹಿಳಾ ಕಾರ್ಯಕರ್ತರು ಶಿವಮೊಗ್ಗದಲ್ಲಿ ಈಶ್ವರಪ್ಪ ಅವರನ್ನು ಸುಲಭವಾಗಿ ಪರಿಗಣಿಸುವಂತಿಲ್ಲವೆಂಬ ಸಂದೇಶ ರವಾನಿಸಿದರು.
ಇಷ್ಟಕ್ಕೆ ಸುಮ್ಮನಾಗದ ಅವರು, ಶಿವಮೊಗ್ಗದಿಂದ ಬೆಂಗಳೂರಿಗೆ ಬರಲು ಹಿಡಿದ ರಸ್ತೆ ಮಾರ್ಗ ಸಹ ಗಮನ ಸೆಳೆಯಿತು. ತಮ್ಮೊಂದಿಗೆ ಬೆಂಬಲಿಗರ 150 ಕಾರುಗಳೊಂದಿಗೆ ಕಡೂರಿಗೆ ತೆರಳಿ ಅಲ್ಲಿ ಬೆಂಬಲಿಗರ ಸಭೆ ನಡೆಸಿದರು. ನಂತರ ತಿಪಟೂರು, ಕಿಬ್ಬನಹಳ್ಳಿ ಕ್ರಾಸ್ ನಲ್ಲಿ ಬೆಂಬಲಿಗರ ಸಭೆ ನಡೆಸಿ ಶಕ್ತಿ ಪ್ರದರ್ಶನ ಮಾಡಿದರು.
ಅಲ್ಲಿಂದ ನೇರವಾಗಿ ಸಿದ್ದಗಂಗಾ ಮಠಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದು ಸಿಎಂ ನಿವಾಸಕ್ಕೆ ಅಗಮಿಸುವ ವೇಳೆಗೆ ಅಲ್ಲಿ ಅವರ ಬೆಂಬಲಿಗರ ಪಡೆಯೇ ನೆರೆದಿತ್ತು. ನಂತರ ಇವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಸಚಿವರಾದ ಮುರುಗೇಶ್ ನಿರಾಣಿ, ಅರಗ ಜ್ಞಾನೇಂದ್ರ , ಎಂ.ಟಿ.ಬಿ.ನಾಗರಾಜ್, ಬೈರತಿ ಬಸವರಾಜ್ ಹಾಜರಿದ್ದು ಬೆಂಬಲ ವ್ಯಕ್ತಪಡಿಸಿದರು. ಇದೆಲ್ಲವೂ ಈಶ್ವರಪ್ಪ ಅವರ ಕಾರ್ಯತಂತ್ರದ ಭಾಗ.
ಮರುದಿನ ತಮ್ಮ ನಿವಾಸದಲ್ಲಿ ಮಠಾಧೀಶರೊಂದಿಗೆ ಸಭೆ ನಡೆಸಿದರು. ರಾಜ್ಯದ ವಿವಿಧ ಭಾಗಗಳಲ್ಲಿರುವ ಹಿಂದುಳಿದ, ದಲಿತ ಸಮುದಾಯಕ್ಕೆ ಸೇರಿದ ಮಠಾಧೀಶರು ಹಾಜರಾಗಿ ಸಭೆ ನಡೆಸಿದರು. ಇದರಲ್ಲಿ ಕನಕಗುರುಪೀಠದ
ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ,ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ,
ಭೋವಿಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಮಾದರಚನ್ನಯ್ಯ ಸ್ವಾಮೀಜಿ, ಭಗೀರಥ ಪೀಠದ ಪುರುಷೋತ್ತಮನಾಂದಪುರಿ ಸ್ವಾಮೀಜಿ ಕನಕಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ,
ನಾರಾಯಣ ಗುರುಪೀಠದ ರೇಣುಕಾನಂದ ಸ್ವಾಮೀಜಿ, ಮಡಿವಾಳ ಗುರುಪೀಠದ ಬಸವಮಾಚಿದೇವ ಮಹಾಸ್ವಾಮೀಜಿ ಉಪಸ್ಥಿತರಿದ್ದು,ಈಶ್ವರಪ್ಪ ಅವರ ಹೋರಾಟದಲ್ಲಿ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡಿದರೆನ್ನಲಾಗಿದೆ.
ಈ ಹಿಂದೆ ಯಡಿಯೂರಪ್ಪ ಅಧಿಕಾರ ವಂಚಿತರಾದಾಗ ವೀರಶೈವ-ಲಿಂಗಾಯತ ಮಠಗಳು ಅವರ ಬೆಂಬಲಕ್ಕೆ ನಿಂತಂತೆ ಇದೀಗ ದಲಿತ ಮತ್ತು ಹಿಂದುಳಿದ ಸಮುದಾಯಕ್ಕೆ ಸೇರಿದ ಮಠಾಧೀಶರು ಇವರ ಬೆಂಬಲಕ್ಕೆ ನಿಲ್ಲುವ ಮೂಲಕ ಹಿಂದುಳಿದ ವರ್ಗಕ್ಕೆ ಸೇರಿದ ತಮ್ಮನ್ನು ಮುಟ್ಟುವುದು ಅಷ್ಟು ಸುಲಭವಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಅಷ್ಟೇ ಅಲ್ಲ ಪಕ್ಷ ಕೂಡಾ ತಾವೊಬ್ಬ ಹಿಂದುಳಿದ ಸಮುದಾಯದ ನಾಯಕನಾಗಿದ್ದು ತಮ್ಮ ನ್ನು ಸೂಕ್ತ ರೀತಿಯಲ್ಲಿ ಗಮನಿಸಿಕೊಳ್ಳಬೇಕು ಎಂಬ ಸಂದೇಶ ರವಾನಿಸಿದ್ದಾರೆ.
ಮಂತ್ರಿ ಸ್ಥಾನದ ರಾಜಿನಾಮೆ ಪಡೆದ ಬಿಜೆಪಿ ನಾಯಕರಿಗೆ ಇದೀಗ ಈಶ್ವರಪ್ಪ ಪ್ರಯೋಗಿಸುತ್ತಿರುವ ಪ್ರತ್ಯಸ್ತ್ರ ತಲೆಬಿಸಿ ಮಾಡಿದೆ.