ಬೆಂಗಳೂರು,ಮೇ.14- ಅವನು ಅರೆಸ್ಟ್ ಆಗಿದ್ದಾನಲ್ವಾ! ಅವನಿಗೆ ನನ್ನ ಕಣ್ಣ ಮುಂದೆಯೇ ಶಿಕ್ಷೆ ಕೊಡಬೇಕು ಎಂದು ಆಸಿಡ್ ದಾಳಿಗೊಳಗಾಗಿ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಕನವರಿಸಿದ್ದಾಳೆ.
ನಾನು ನೋವಿನಲ್ಲಿ ನರಳುವಂತೆ ಅವನು ನರಳಬೇಕು ಎಂದು ಆಸಿಡ್ ದಾಳಿಕೋರನ ವಿರುದ್ಧ ಯುವತಿ ಆಕ್ರೋಶ ಭರಿತ ಮಾತುಗಳನ್ನಾಡಿದ್ದಾಳೆ. ನಾಗೇಶ್ ನನ್ನು ಬಂಧಿಸಲಾಗಿದೆ ಎಂದು ತಿಳಿಸಿದಾಗ ನೋವಿನಲ್ಲೂ ಕಿರಾತಕನಿಗೆ ಶಿಕ್ಷೆ ಆಗಬೇಕು ಎಂದು ಯುವತಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಇನ್ನೂ ದಾಳಿಕೋರ ನಾಗೇಶ್ ಗೆ ಚಿತ್ರಹಿಂಸೆಯಾಗುವ ಶಿಕ್ಷೆ ಆಗಬೇಕು ಎಂದು ಸಂತ್ರಸ್ತ ಯುವತಿಯ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಕೃತ್ಯ ನಡೆಸಿ16 ದಿನಗಳ ಬಳಿಕ ನಾಗೇಶ್ ಪೊಲೀಸರಿಗೆ ಸಿಕ್ಕಿಬಿದ್ದಿರುವುದಕ್ಕೆ ಪ್ರತಿಕ್ರಿಯಿಸಿರುವ ಕುಟುಂಬಸ್ಥರು ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗಳ ಸ್ಥಿತಿ ಕಂಡು ಕಣ್ಣೀರಲ್ಲಿ ಕೈತೊಳೆಯುತ್ತಿರುವ ಯುವತಿಯ ಕುಟುಂಬಸ್ಥರು ಆ್ಯಸಿಡ್ ನಾಗೇಶನಿಗೆ ತಕ್ಕ ಶಿಕ್ಷೆ ಆಗಬೇಕು. ‘ಅವನು ಒಂದೇ ಸಲ ಅಲ್ಲ, ನರಳಿ ನರಳಿ ಸಾಕಬೇಕು. ಅಂತಹ ಶಿಕ್ಷೆ ಕೊಡಿ’ ಎಂದು ಆಗ್ರಹಿಸಿದ್ದಾರೆ. ಯುವತಿಯ ದೊಡ್ಡಮ್ಮ ಮಾತಾಡಿ, ‘ಚಾಮುಂಡಿ ಮಹಿಷಾಸುರನ ಕೊಂದ ಹಾಗೆ ಆ್ಯಸಿಡ್ ನಾಗನನ್ನ ಕೊಲ್ಲಬೇಕು. ಒಂದೇ ಸಲ ಸಾಯಿಸಬೇಡಿ, ನಮ್ಮ ಮಗಳ ನೋವು ಅವನಿಗೂ ಗೊತ್ತಾಗಬೇಕು. ಅವನಿಗೆ ಕ್ರೂರಾತೀ ಕ್ರೂರ ಶಿಕ್ಷೆ ಕೊಡಬೇಕು’ ಎಂದು ಆಗ್ರಹಿಸಿದರು. ‘ಅವನ ಕಾಲು ಮುರಿದು ಭಿಕ್ಷೆ ಬೇಡಲು ಹಾಕ್ಬೇಕು. ನನ್ನ ಮಗಳ ಮುಖ ನೋಡಿ 15 ದಿನಗಳಾಯ್ತು’ ಅಂತ ಬೇಸರ ವ್ಯಕ್ತಪಡಿಸಿದರು. ‘ಆ ಪಾಪಿ ನಾಗೇಶ್ ಬೇರೆ ಹೆಣ್ಣು ಮಗಳನ್ನಲ್ಲ, ಅವನ ತಾಯಿ ಮುಖ ನೋಡೋದಕ್ಕೂ ಹೆದರಬೇಕು. ಅಂತಹ ಶಿಕ್ಷೆ ಅವನಿಗೆ ಆಗಬೇಕು’ ಎಂದು ಯುವತಿ ಚಿಕ್ಕಮ್ಮ ಆಗ್ರಹಿಸಿದರು.
ಸಂತ್ರಸ್ತೆಯ ಚಿಕ್ಕಪ್ಪ ನಾಗೇಶ್ ಬಂಧಿಸಿದ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿ ‘ಪೊಲೀಸ್ ಇಲಾಖೆಗೆ ತುಂಬಾ ಧನ್ಯವಾದ, ಪೊಲೀಸರು ಧೈರ್ಯ ತುಂಬಿದರು ಹೇಳಿದಂತೆ ಅವನನ್ನು ಬಂಧಿಸಿದ್ದಾರೆ’ ಎಂದರೆ, ಯುವತಿಯ ಸಹೋದರಿ, ‘ನನ್ನ ತಂಗಿ ಅಲ್ಲಿ ನರಳಾಡ್ತಿದ್ದಾಳೆ. ಅವನು ನನ್ನ ತಂಗಿ ಕಣ್ಣ ಮುಂದೆಯೇ ಸಾಯಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು
ಯುವತಿಯ ತಂದೆ, ‘ಮಗಳಿಗೆ ಇನ್ನೂ ಊಟ ಮಾಡಲು ಆಗುತ್ತಿಲ್ಲ ಪೈಪ್ ಮೂಲಕವೇ ದ್ರವ ಆಹಾರ ಕೊಡಲಾಗುತ್ತಿದೆ’ ಎಂದು ಕಣ್ಣೀರು ಹಾಕಿದ್ದಾರೆ.