ಬೆಂಗಳೂರು,ಜು.29-
ಕೇಂದ್ರಸರ್ಕಾರ ಹಿಂಬಾಗಿಲ ಮೂಲಕ ಕರ್ನಾಟಕದ ಆರ್ಥಿಕ ಬೆಳವಣಿಗೆಯನ್ನು ಕುಗ್ಗಿಸುವ ಪ್ರಯತ್ನವನ್ನು ಮಾಡುತ್ತಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಪ್ರತಿಯಾಗಿ ಗುಜರಾತ್, ಉತ್ತರಪ್ರದೇಶ ಸೇರಿ ಉತ್ತರಭಾರತದ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ದೂರಿದರು.
ಕೇಂದ್ರದಿಂದ ರಾಜ್ಯಕ್ಕೆ ದೊರೆಯಬೇಕಾದ ಆರ್ಥಿಕ ನೆರವು ಯಾರ ಭಿಕ್ಷೆಯೂ ಅಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ ಕಡಿಮೆ ಅನುದಾನ ಇತ್ತು ಎಂಬುದು ಹಾಸ್ಯಾಸ್ಪದ. ಆಗಿನ ಬಜೆಟ್ ಗಾತ್ರ ಮತ್ತು ಈಗಿನ ಬಜೆಟ್ ಗಾತ್ರಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಹೇಳಿದರು.
ದಕ್ಷಿಣ ಭಾರತದವನ್ನು ಮತ ಗಳಿಕೆಗಷ್ಟೇ ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ. ಉಳಿದಂತೆ ಯಾವುದೇ ನೆರವು ನೀಡುತ್ತಿಲ್ಲ. ಕರ್ನಾಟಕದ ಬೆಳವಣಿಗೆಗೆ ಹಿಂಬಾಗಿಲ ಮೂಲಕ ಅಡ್ಡಿಪಡಿಸುವ ಪ್ರಯತ್ನವನ್ನು ನಿರಂತರವಾಗಿ ನಡೆಸಲಾಗುತ್ತಿದೆ.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಕರ್ನಾಟಕ ಸರ್ಕಾರದ ಮೇಲೆ ಗೂಬೆ ಕೂರಿಸುವ ಯತ್ನ ನಡೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದ ಬಳಿಕ ಇಲ್ಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ಸಂಗ್ರಹಿಸಿಕೊಳ್ಳುತ್ತದೆ. ಅವರು ಕೊಟ್ಟಾಗ ನಾವು ತೆಗೆದುಕೊಳ್ಳಬೇಕು. ಇನ್ನು ಆದಾಯ ತೆರಿಗೆ ವ್ಯವಸ್ಥೆಯಲ್ಲಿ ನಾವು ಚಕಾರವನ್ನೇ ಎತ್ತುವಂತಿಲ್ಲ. ರಾಜ್ಯಸರ್ಕಾರ ಸಹಕಾರ ನೀಡುವುದಿಲ್ಲ ಎಂದು ದೂರುವ ಕೇಂದ್ರಸರ್ಕಾರ ಸದ್ದಿಲ್ಲದೆ 3.50 ಲಕ್ಷ ಕೋಟಿ ತೆರಿಗೆ ವಸೂಲಿ ಮಾಡಿಕೊಳ್ಳುವಾಗ ಸಹಕಾರದ ಬಗ್ಗೆ ಮಾತನಾಡುವುದಿಲ್ಲ ಎಂದರು.
Previous ArticlePeenya ಫ್ಲೈ ಓವರ್ ಸಂಚಾರಕ್ಕೆ ಮುಕ್ತ.
Next Article ರಾಜ್ಯ ಸರ್ಕಾರವನ್ನು ಭ್ರಷ್ಟ ಎಂದು ಬಿಂಬಿಸುವ ಯತ್ನ.