ಚಿಕ್ಕಮಗಳೂರು,ನ.30-
ಬಾಬಾ ಬುಡನ್ ಗಿರಿ ಎಂದೇ ಪ್ರಸಿದ್ಧಿ ಪಡೆದಿರುವ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲಿರುವ ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇನಾಂ ದತ್ತಪೀಠವನ್ನು ಸಂಪೂರ್ಣ ಹಿಂದೂ ಪೀಠ ಎಂದು ಘೋಷಿಸುವಂತೆ ಆಗ್ರಹಿಸುವ ಗುರಿಯೊಂದಿಗೆ ಈ ಬಾರಿ ದತ್ತಮಾಲ ಅಭಿಯಾನ ನಡೆಯುತ್ತಿದೆ.
ಭಜರಂಗದಳ ಮತ್ತು ವಿಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಡೆಯುತ್ತಿರುವ 25ನೇ ವರ್ಷದ ದತ್ತಜಯಂತಿ ಅಂಗವಾಗಿ ದತ್ತಮಾಲ ಆಚರಣೆಗೆ ಚಾಲನೆ ದೊರೆತಿದೆ.
ಇದಕ್ಕಾಗಿ ಚಿಕ್ಕಮಗಳೂರು ನಗರ, ಪಟ್ಟಣಗಳಲ್ಲಿ ಕೇಸರಿ ಭಾವುಟ ಮತ್ತು ಬಂಟಿಂಗ್ಸ್ ಕಟ್ಟಲಾಗಿದ್ದು
ಇಡೀ ನಗರ ಕೇಸರಿಮಯವಾಗಿದೆ.ಈ ಆಚರಣೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗೃತಾ ಕ್ರಮ ಕೈಗೊಂಡಿದ್ದಾರೆ.
ಅಭಿಯಾನದ ಹಿನ್ನೆಲೆಯಲ್ಲಿ ಭಜರಂಗದಳ, ವಿಹೆಚ್ಪಿ ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಡಿ. 6 ರಂದು ರಾಜ್ಯದಾದ್ಯಂತ ದತ್ತಮಾಲೆ ಧಾರಣೆ ಮಾಡಿ ಚಿಕ್ಕಮಗಳೂರಿನತ್ತ ಧಾವಿಸುತ್ತಾರೆ.
ಚಿಕ್ಕಮಗಳೂರಿನಲ್ಲಿ ಡಿ.12 ರಂದು ಅನಸೂಯಾ ಜಯಂತಿ ಮಹಿಳೆಯರಿಂದ ಸಂಕೀರ್ತನ ಯಾತ್ರೆ ನಡೆಯಲಿದೆ. ಡಿ. 13 ರಂದು ನಗರದಲ್ಲಿ ಬೃಹತ್ ಶೋಭಾಯಾತ್ರೆ ನೆರವೇರುತ್ತದೆ. ನಂತರ ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳು ಗುಹೆಯಲ್ಲಿನ ದತ್ತ ಪಾದುಕೆ ದರ್ಶನ ಪಡೆಯುತ್ತಾರೆ.
ಈ ದಿನ ರಾಜ್ಯದ ಮೂಲೆಗಳಿಂದ ಸಾವಿರಾರು ದತ್ತಮಾಲಾಧಾರಿಗಳು ಇಲ್ಲಿಗೆ ಆಗಮಿಸುತ್ತಾರೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇನಾಂ ದತ್ತಪೀಠದಲ್ಲಿ ಗೋರಿಗಳಿಲ್ಲ ಇದು ಹಿಂದೂಗಳ ಪವಿತ್ರ ದತ್ತಪೀಠ ಅನ್ನುತ್ತಿದ್ದರೇ, ಮುಸ್ಲೀಮರು ಬಾಬಾ ಬುಡನ್ ಜೊತೆ ದಾದಾಹಯಾತ್ ಖಲಂದರ್ ಸೇರಿದಂತೆ ಅವರ ಶಿಷ್ಯರ ಗೋರಿಗಳಿರುವ ಪವಿತ್ರ ಸ್ಥಳ ಎನ್ನುತ್ತಿದ್ದಾರೆ. ಹಿಂದೂ-ಮುಸ್ಲಿಂ ನಡುವಿನ ದೇವರ ಹೆಸರಿನ ಭೂ ವಿವಾದ 25 ವರ್ಷಗಳಿಂದ ಜೀವಂತವಾಗಿದೆ
Previous Articleನಿಮಗೆ Scented Candles ಇಷ್ಟನಾ?
Next Article ಶತಾಯುಷಿಗೆ ಸುಪ್ರೀಂ ಕೋರ್ಟ್ ಜಾಮೀನು.