ಬೆಂಗಳೂರು.ನ,13:
ಸಿಲಿಕಾನ್ ಸಿಟಿ ಬೆಂಗಳೂರು ಡ್ರಗ್ಸ್ ಸಿಟಿಯಾಗಿ ಪರಿವರ್ತನೆ ಆಗುತ್ತಿದೆ ಎಂಬ ಆತಂಕದ ಬೆನ್ನಲ್ಲೇ ಇದೀಗ ಚಾಕೊಲೇಟ್ ರೂಪದಲ್ಲಿ ಮಾದಕ ವಸ್ತುಗಳನ್ನು ಮಕ್ಕಳಿಗೆ ನೀಡುವ ವ್ಯವಸ್ಥಿತ ಜಾಲವೊಂದು ಕಾರ್ಯ ನಿರ್ವಹಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಕಾನ್ಪುರದ ಮಹಾಲಕ್ಷ್ಮಿ ಫಾರ್ಮ್ ಕಂಪನಿಯ ಮಹಾಕಾಳ್ ಎಂಬ ಹೆಸರಲ್ಲಿ ಈ ಚಾಕೊಲೇಟ್ ತಯಾರಾಗುತ್ತಿದೆ. ಕೆಲ ರೈಲ್ವೆ ಕೂಲಿ ಕಾರ್ಮಿಕರ ಸಹಾಯ ಪಡೆದು ಇದನ್ನು ರೈಲುಗಳ ಮೂಲಕ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಿಗೆ ಪೂರೈಕೆ ಮಾಡಲಾಗುತ್ತಿದೆ.
ಶಾಲಾ ಕಾಲೇಜು ಆವರಣ ಐಟಿಬಿಟಿ ಕಂಪನಿಗಳು ತಲೆಯೆತ್ತಿರುವ ಪ್ರದೇಶದ ಗೂಡಂಗಡಿಗಳು ಮತ್ತು ಕೆಲ ನಿರ್ದಿಷ್ಟ ಪಡಿಸಿದ ವ್ಯಕ್ತಿಗಳ ಮೂಲಕ ಈ ಚಾಕೋಲೇಟನ್ನು ವಿತರಿಸಲಾಗುತ್ತಿದೆ ಎಂಬ ಅಂಶ ಪತ್ತೆಯಾಗಿದೆ.
ಈ ಬಗ್ಗೆ ಖಚಿತ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಮಾಡಿದ ಬೆಂಗಳೂರಿನ ಜಿಗಣಿ ಪೊಲೀಸರು ಅಂಕೂರ್, ಸೂರಜ್, ಸೋಮ್ ಸೇನ್, ಆನಂದ್ ಕುಮಾರ್, ಜೀತೂ ಸಿಂಗ್ ನನ್ನು ಬಂಧಿಸಿ 10 ಲಕ್ಷ ರೂ. ಮೌಲ್ಯದ 50 ಕೆಜಿ ಬಾಂಗ್ ಚಾಕೊಲೇಟ್ ಜಪ್ತಿ ಮಾಡಿದ್ದಾರೆ.
ಗಾಂಜಾ ಬಳಸಿ ತಯಾರಿಸುವ ಇದು ಮಕ್ಕಳು ತಿನ್ನುವ ಸಾಮಾನ್ಯ ಚಾಕೊಲೇಟ್ ರೀತಿಯೇ ಕಾಣಿಸುತ್ತಿದೆ. ಕೈಗಾರಿಕಾ ಪ್ರದೇಶ, ಶಾಲಾ ಕಾಲೇಜು ಆವರಣಗಳನ್ನು ಗುರಿಯಾಗಿಸುತ್ತಿದ್ದ ಆರೋಪಿಗಳು ಒಂದು ಚಾಕೊಲೇಟ್ಗೆ ನೂರು ರೂಗಳಂತೆ ಮಾರಾಟ ಮಾಡುತ್ತಿದ್ದರು.
ಇದರಲ್ಲಿ ಕೇವಲ ಬಂಧಿತರು ಮಾತ್ರವಲ್ಲದೆ ಇನ್ನೂ ಅನೇಕರು ಶಾಮೀಲಾಗಿರುವ ಸಾಧ್ಯತೆ ಇದೆ ಎಂಬ ಸುಳಿವು ಇದ್ದು, ಇನ್ನಷ್ಟು ಆರೋಪಿಗಳಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ. ಅದಲ್ಲದೇ ನಗರದ ಬೇರೆ ಬೇರೆ ಪ್ರದೇಶಗಳಲ್ಲೂ ಇವುಗಳು ಪೂರೈಕೆ ಮತ್ತು ಮಾರಾಟವಾಗುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.
Previous Articleಬಿಗಿಯಾಗುತ್ತಿದೆ ED ಕುಣಿಕೆ.
Next Article ಬಂಧನ ಭೀತಿಯಲ್ಲಿ ರಾಮ್ ಗೋಪಾಲ್ ವರ್ಮ.