ಬೆಂಗಳೂರು, ಜೂ. 21
ಸುಗಮ ಸಂಚಾರ ಹಾಗೂ ಸಂಚಾರಿ ದಟ್ಟಣೆ ನಿಯಂತ್ರಣಕ್ಕೆ ಗಾಂಧಿನಗರದ 1 ಕಿ.ಮೀ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಡಿಯಲ್ಲಿ ಫ್ರೀಡಂ ಪಾರ್ಕ್ ಸಮೀಪ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರು ಡಿಸಿ ಹಾಗೂ ಪೊಲೀಸ್ ಆಯುಕ್ತರು ಸೇರಿ ಗಾಂಧಿನಗರದ ಪ್ರಮುಖ ರಸ್ತೆಗಳಲ್ಲಿ ಸುಮಾರು 1 ಕಿ.ಮೀ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ನಿರ್ಬಂಧ ಮಾಡಿದ್ದಾರೆ. ಇಲ್ಲಿನ ರಸ್ತೆ ವಿಶಾಲವಾಗಿರಬೇಕು. ಎಲ್ಲಾ ವ್ಯಾಪಾರಿಗಳಿಗೆ ಲಾಭವಾಗಬೇಕು ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು
ಈ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣದ ಮೂಲಕ ಬೆಂಗಳೂರು ನಗರ ಇಂದು ಹೊಸ ಇತಿಹಾಸ ಪುಟಕ್ಕೆ ಸೇರಿದೆ. ಅಲ್ಲದೆ ಇಡೀ ರಾಜ್ಯಕ್ಕೆ ಸಂದೇಶ ರವಾನೆಯಾಗಿದೆ. ಇಲ್ಲಿ ಪ್ರತಿ ಗಂಟೆಗೆ ವಾಹನ ನಿಲುಗಡೆಗೆ 20-30 ರೂ. ನಿಗದಿ ಮಾಡಿದ್ದು, ಎರಡು ಮೂರು ಕಾರು ಹೊಂದಿರುವವರು ಕೂಡ ಇಲ್ಲಿ ವಾಹನ ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ನಗರದ ಯಾವುದೇ ಭಾಗದಿಂದ ಜನ ತಮ್ಮ ವಾಹನದಲ್ಲಿ ಬಂದರೂ ಇಲ್ಲಿ ಅವರು ವಾಹನ ನಿಲುಗಡೆ ಮಾಡಿ, ಅವರು ವಿಧಾನಸೌಧ, ಹೈಕೋರ್ಟ್, ರೈಲ್ವೇ ನಿಲ್ದಾಣ ಸೇರಿದಂತೆ ಗಾಂಧಿ ನಗರದ ಸುತ್ತಮುತ್ತಲಿನ ಪ್ರದೇಶಕ್ಕೆ ಹೋಗಲು ಗುತ್ತಿಗೆದಾರರು ಉಚಿತ ಸಂಚಾರಿ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ. ಗಾಂಧಿ ನಗರದಲ್ಲಿ ದಿನೇಶ್ ಗುಂಡೂರಾವ್ ಅವರ ಮುಖಂಡತ್ವದಲ್ಲಿ ವಿಶೇಷ ಯೋಜನೆ ಜಾರಿ ಮಾಡಲಾಗಿದೆ.
ಗಾಂಧಿನಗರ ಎಂದರೆ ಮಧ್ಯಮ ವರ್ಗದ ಜನ ಹೆಚ್ಚಾಗಿ ಬರುತ್ತಿದ್ದಾರೆ. ವಾಹನ ನಿಲುಗಡೆ ಸಮಸ್ಯೆ ಎದುರಾಗುತ್ತಿತ್ತು. ಈಗ ಅದಕ್ಕೆ ಪರಿಹಾರ ನೀಡಲಾಗುತ್ತಿದೆ. ಈ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣ ಮಾಡುವ ಹೊಸ ಪ್ರಯೋಗಕ್ಕೆ ಗುತ್ತಿಗೆದಾರರು ಕೈ ಹಾಕಿದ್ದಾರೆ. ಅವರು ಸರ್ಕಾರಕ್ಕೂ 1.50 ಕೋಟಿ ಹಣ ಪಾವತಿಸಿ, ಹೇಗೆ ಆದಾಯ ಮಾಡುತ್ತಾರೋ ಗೊತ್ತಿಲ್ಲ. ಇದು ಸುಲಭವಾದ ಕೆಲಸವಲ್ಲ. ಈ ವ್ಯವಸ್ಥೆ ಗಾಂಧಿನಗರಕ್ಕೆ ಬಹಳ ಅವಶ್ಯಕವಾಗಿದೆ.
ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ಮಾಡಲು ಬರುವವರಿಗೂ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. ಎಲ್ಲೋ ಗಾಡಿ ನಿಲ್ಲಿಸಿ ಬರುವುದಕ್ಕಿಂತ ಇಂತಹ ವ್ಯವಸ್ಥೆ ಬಳಸಿಕೊಳ್ಳುವುದು ಹೆಚ್ಚಿನ ಅನುಕೂಲವಾಗುತ್ತದೆ. ಖಾಸಗಿಯವರು, ವರ್ತಕರು, ಗ್ರಾಹಕರು ಸೇರಿದಂತೆ ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು. ಇದು ಮಾದರಿ ಯೋಜನೆಯಾಗಿದ್ದು, ಬೆಂಗಳೂರಿನ ಇತರ ಕಡೆಗಳಲ್ಲಿ ಎಲ್ಲೆಲ್ಲಿ ಈ ಯೋಜನೆ ಜಾರಿ ಮಾಡಬಹುದು ಎಂದು ಚರ್ಚೆ ಮಾಡಿ ಜಾರಿ ಮಾಡುತ್ತೇವೆ ಎಂದು ತಿಳಿಸಿದರು.
ಗಾಂಧಿನಗರದಲ್ಲಿ ವಾಹನ ನಿಲುಗಡೆ ನಿಷೇಧ: ಡಿಸಿಎಂ ಡಿ.ಕೆ. ಶಿವಕುಮಾರ್*
Previous Articleನಾಲ್ವರು ಹೆಂಡಿರ ಮುದ್ದಿನ ಗಂಡ.
Next Article ರೋಹಿಣಿ ಸಿಂಧೂರಿ ವಿರುದ್ಧ ಲೋಕಾಯುಕ್ತಕ್ಕೆ ದೂರು.