ಬೆಂಗಳೂರು,ಆ.7-
ಮಾಜಿ ಸಚಿವ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾಕ್ಟರ್ ಕೆ ಸುಧಾಕರ್ ಅವರ ಹೆಸರು ಡೆತ್ ನೋಟ್ ನಲ್ಲಿ ಬರೆದಿಟ್ಟು ಕಾರು ಚಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಂಸದ ಕೆ. ಸುಧಾಕರ್ ಆಪ್ತ, ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ ಅವರ ಅಳಿಯ ನಾಗೇಶ್ ಎನ್ ಚಿಕ್ಕ ಕಾಡಿಗೇನಹಳ್ಳಿ ಹಾಗು ಮಂಜುನಾಥ್ ಉದ್ಯೋಗ ಖಾಯಂಗೊಳಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದಾರೆ ಎಂದು ಡೆತ್ ನೋಟ್ ಬರೆದಿಟ್ಟು ಚಿಕ್ಕಬಳ್ಳಾಪುರದ ಬಾಪೂಜಿನಗರ ಬಾಬು(33) ಆತ್ಮಹತ್ಯೆಗೆ ಶರಣಾಗಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಜೀಪ್ ಚಾಲಕನಾಗಿದ್ದ ಈತ ಆಡಳಿತ ಭವನದ ಆವರಣದಲ್ಲೇ ನೇಣಿಗೆ ಶರಣಾಗದ್ದಾನೆ. ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ 25 ಲಕ್ಷ ಹಣ ಪಡೆದು ವಂಚಿಸಿದ್ದಾರೆ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ಅಷ್ಟೇ ಅಲ್ಲದೇ ಜಿಲ್ಲಾ ಪಂಚಾಯತಿ ಲೆಕ್ಕ ಸಹಾಯಕರ ವಿರುದ್ಧವೂ ಡೆತ್ ನೋಟ್‌ನಲ್ಲಿ ಬಾಬು ಹಲವು ಆರೋಪ ಮಾಡಿದ್ದಾರೆ. ಪರಿಶಿಷ್ಟ ಜನಾಂಗಕ್ಕೆ ಸೇರಿದ್ದ ಬಾಬು ಕಳೆದ 8 ವರ್ಷಗಳಿಂದ ಅಧಿಕಾರಿಗಳಿಗೆ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ ಕಚೇರಿ ಬಳಿ ಚಾಲಕರು ಕುಳಿತುಕೊಳ್ಳುತ್ತಿದ್ದ ಜಾಗದಲ್ಲಿದ್ದ ಹೊಂಗೆ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ.
ಎಂದಿನಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ಕೆಲಸಕ್ಕೆ ಬಂದ ನೌಕರರು ಹಾಗು ಕಾಂಪೌಡ್ ಹೊರಗಡೆ ಹೂತೋಟದಲ್ಲಿ ಹೂಕೀಳುತ್ತಿದ್ದ ರೈತರು ಇದನ್ನು ಗಮನಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೋಲಿಸ್ ಠಾಣೆಯ ಅಧಿಕಾರಿಗಳು ತೆರಳಿ ಪರಿಶೀಲಿಸಿದ್ದಾರೆ.