ಬೆಂಗಳೂರು,ಮಾ.28-
ಮಹಾ ನಗರ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ದೃಷ್ಟಿಯಿಂದ ಟ್ರಾಫಿಕ್ ಸಿಗ್ನಲ್
ಪರಿಚಯಿಸುವ ಮೂಲಕ ರಾಜ್ಯದ ಜನರ ಗಮನ ಸೆಳೆದಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಎನ್. ಗರುಡಾಚಾರ್ ನಿಧನ ಹೊಂದಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಎಸ್ ಪಿ ಯಿಂದ ಹಿಡಿದ ರಾಜ್ಯ ಪೊಲೀಸ್ ಮುಖ್ಯಸ್ಥರವರೆಗೆ ಸುದೀರ್ಘ ಸೇವೆ ಸಲ್ಲಿಸಿದ ದಕ್ಷತೆ ಪ್ರಾಮಾಣಿಕತೆಗೆ ಹೆಸರಾಗಿದ್ದ ಗರುಡಾಚಾರ್ ಅವರಿಗೆ 96 ವರ್ಷ ವಯಸ್ಸಾಗಿತ್ತು.
ಬಸವನಗುಡಿಯ ಮನೆಯಲ್ಲಿ ಮುಂಜಾನೆ 3ರ ವೇಳೆ ವಯೋ ಸಹಜ ಸಾವು ಕಂಡಿರುವ ಗರುಡಾಚಾರ್ ಅಂತ್ಯಕ್ರಿಯೆಯು ನಾಳೆ ಸಂಜೆ 4 ಗಂಟೆಗೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ನೆರವೇರಿಸಲು ಕುಟುಂಬ ವರ್ಗದವರು ತೀರ್ಮಾನಿಸಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಂಡಿಗನವಿಲೆಯ ಕೃಷಿ ಕುಟುಂಬದಲ್ಲಿ 1929ರಲ್ಲಿ ಹುಟ್ಟಿದ ಬಿ.ಎನ್. ಗರುಡಾಚಾರ್, ಬಾಲ್ಯದಿಂದಲೂ ಅತ್ಯಂತ ಕಷ್ಟದಲ್ಲಿಯೇ ಜೀವನ ಸಾಗಿಸಿದರು ಹಳ್ಳಿಯ ಕೂಲಿ ಮಠದಲ್ಲಿ ವಿದ್ಯಾಭ್ಯಾಸ ಆರಂಭಿಸಿದ ಬಾಲಕ ಗರುಡಾಚಾರ್, ಗೊರೂರು, ಹಾಸನ, ಮೈಸೂರುಗಳಲ್ಲಿ ಅಲೆದಾಡಿ, ಅವರಿವರ ಮನೆಯಲ್ಲಿ ಆಶ್ರಯ ಪಡೆದು, ವಾರಾನ್ನ ಉಂಡು ಎಂ.ಎ. ಸ್ನಾತಕೋತ್ತರ ಪದವಿ ಪಡೆದರು.
ಮೊದಲಿಗೆ ಸರ್ವೇಯರ್, ನಂತರ ಅಬಕಾರಿ ಇನ್ಸ್‌ಪೆಕ್ಟರ್ ಕೆಲಸಕ್ಕೆ ಸೇರಿ 1953ರಲ್ಲಿ ಐಪಿಎಸ್ ಪಾಸ್ ಮಾಡಿ ಮೊದಲಿಗರೆನಿಸಿಕೊಂಡು ತಿರುವನ್ವೇಲಿಯಲ್ಲಿ ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ಹುದ್ದೆ ಅಲಂಕರಿಸಿದರು. ನಂತರ ರಾಜ್ಯದ ಸೇವೆಗೆ ಬಂದ ಗುರುಡಾಚಾರ್‌ಗೆ, ಬಿಂಡಿಗನವಿಲೆಯ ಬಡತನ, ಹಸಿವು, ಅವಮಾನ, ಹಿಂಜರಿಕೆ, ಮುಗ್ಧತೆ, ಪ್ರಾಮಾಣಿಕತೆ ಎಲ್ಲವೂ ಬೆನ್ನಿಗಿದ್ದವು. ಅವುಗಳ ಅಗಾಧ ಅನುಭವ ಅವರನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರುವಲ್ಲಿ ಪ್ರಶಸ್ತಿ, ಪುರಸ್ಕಾರ, ಪ್ರಶಂಸೆ ಪಡೆಯುವಲ್ಲಿ ಉದ್ದಕ್ಕೂ ಸಹಕರಿಸಿದ್ದವು.
ಪೊಲೀಸ್ ವೃತ್ತಿಯಲ್ಲಿ ಶಿಸ್ತು ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಿಸಿದ ಗರುಡಾಚಾರ್ ಬಹಳ ಬೇಗ ಉನ್ನತ ಸ್ಥಾನಗಳನ್ನು ಅಲಂಕರಿಸಿ, ಅಧಿಕಾರಸ್ಥ ರಾಜಕಾರಣಿಗಳ ಕಣ್ಣಿಗೆ ಬಿದ್ದಿದ್ದರು. ಕೊಪ್ಪಳ, ಹುಮ್ನಾಬಾದ್, ತುಮಕೂರು, ಬಳ್ಳಾರಿ, ಬೆಂಗಳೂರು ಜಿಲ್ಲಾ ಎಸ್ಪಿಯಾಗಿ ಉತ್ತಮ ಸೇವೆ ಸಲ್ಲಿಸಿ ಹೆಸರಾಗಿದ್ದರು.
ಬಿ.ಎನ್ ಗರುಡಾಚಾರ್ ಅವರು 1963ರಲ್ಲಿ ನಗರದ ಸಂಚಾರ ಪೊಲೀಸ್ ಉಪ ಆಯುಕ್ತರಾಗಿದ್ದರು, ಆ ಸಮಯದಲ್ಲಿ ಕಾರ್ಪೊರೇಷನ್ ವೃತ್ತದಲ್ಲಿ ನಗರದ ಮೊದಲ ಟ್ರಾಫಿಕ್ ಸಿಗ್ನಲ್ ಪ್ರಾರಂಭಿಸಿದ್ದರು. ಈ ಐತಿಹಾಸಿಕ ಘಟನೆಯ ಸವಿನೆನಪಿಗಾಗಿ, ಈ ಘಟನೆಯನ್ನು ಹೆಸರಿಸುವ ಕಲ್ಲನ್ನು 2021ರ ಮಾರ್ಚ್ ನಲ್ಲಿ ಖುದ್ದು ಗರುಡಾಚಾರ್ ಅವರೇ ಅನಾವರಣಗೊಳಿಸಿದರು.
ಖಡಕ್ ಅಧಿಕಾರಿ ಎಂದೇ ಹೆಸರು ಪಡೆದ ಗರುಡಾಚಾರ್ ವೀರೇಂದ್ರ ಪಾಟೀಲ್, ದೇವರಾಜ ಅರಸು, ಗುಂಡೂರಾವ್, ಹೆಗಡೆಯವರೊಂದಿಗೆ ನಿಕಟಸಂಪರ್ಕವನ್ನಿಟ್ಟುಕೊಂಡಿದ್ದರು.
1975ರ ತುರ್ತು ಪರಿಸ್ಥಿತಿಯಲ್ಲಿ ಇಂಟಲಿಜೆನ್ಸ್ ಐಜಿಯಾಗಿ, ರಾಷ್ಟ್ರಮಟ್ಟದ ರಾಜಕೀಯ ನಾಯಕರನ್ನು ಬಂಧಿಸಿ, ಜೈಲಿಗೆ ಹಾಕುವ ಮೂಲಕ ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದರು.
ದೇವರಾಜ ಅರಸರನ್ನು 1962ರಿಂದ ಬಲ್ಲವರಾಗಿದ್ದು, ಅವರು ಮುಖ್ಯಮಂತ್ರಿಯಾಗಿದ್ದಾಗ, ನಗರ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡು, ನಾಲ್ಕು ವರ್ಷಗಳ ಕಾಲ ಕಮಿಷನರ್ ಹುದ್ದೆಯಲ್ಲಿದ್ದು, ಪ್ರತಿದಿನ ಅರಸು ಅವರೊಂದಿಗೆ ಮುಖಾಮುಖಿಯಾಗುತ್ತಿದ್ದರು.
ನಗರ ಪೊಲೀಸ್ ಕಮಿಷನರ್ ಆಗಿ (4 ವರ್ಷ 2 ತಿಂಗಳು), ಪೊಲೀಸ್ ಡಿಜಿ/ಐಜಿಪಿಯಾಗಿ (3 ವರ್ಷ 8 ತಿಂಗಳು) ಸೇವೆ ಸಲ್ಲಿಸಿದ ಕೀರ್ತಿ ಗರುಡಾಚಾರ್ ಅವರಿಗೆ ಸಲ್ಲುತ್ತದೆ.
ಪೊಲೀಸ್ ಇಲಾಖೆಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿದ ಇವರ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ವಿವಿಧ ಪುರಸ್ಕಾರಗಳನ್ನು ನೀಡಿ ಗೌರವಿಸಿದೆ.
90ರ ಹರೆಯದಲ್ಲೂ ಗುರುಡಾಚಾರ್, ಪುತ್ರ ಶಾಸಕ ಉದಯ್ ಗರುಡಾಚಾರ್ ಅವರ ಪ್ರತಿಷ್ಠಿತ ಗರುಡಾ ಮಾಲ್‌ನಲ್ಲಿ, ಏಳನೆ ಮಹಡಿಯಲ್ಲಿ ಯುವಕರನ್ನೂ ನಾಚಿಸುವ ಲವಲವಿಕೆಯಿಂದ ಕಾರ್ಯ ನಿರ್ವಹಿಸುತ್ತಿದ್ದರು.