ಬೆಂಗಳೂರು,ನ. 27-
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ.
ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಐದು ಖಾಸಗಿ ಕಂಪನಿಗಳಿಗೆ ಅಕ್ರಮವಾಗಿ 34 ಕೋಟಿ ರೂಪಾಯಿ ವರ್ಗಾವಣೆಯಾಗಿರುವುದನ್ನು ಪತ್ತೆಹಚ್ಚಿದ್ದಾರೆ.
ಸಿಐಡಿ ತನಿಖೆ ಎದುರಿಸಿದ್ದ ಜೀವಾ ಅವರ ಖಾತೆಗೆ 7 ಕೋಟಿ 16 ಲಕ್ಷ ರೂ. ಜಮೆಯಾಗಿದೆ.ಭೋವಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ, ನಿಗಮದ ಪ್ರಧಾನ ವ್ಯವಸ್ಥಾಪಕ ಬಿ.ಕೆ.ನಾಗರಾಜಪ್ಪ, ಮಾಜಿ ಅಧೀಕ್ಷಕ ಸುಬ್ಬಪ್ಪ ಅವರು ತಮ್ಮ ನೆರೆಹೊರೆಯವರು, ಬಾಡಿಗೆದಾರರು ಸಂಬಂಧಿಕರ ಹೆಸರಿನಲ್ಲಿ ನಕಲಿ ಕಂಪನಿ ತೆರೆದಿದ್ದು, ಅವರ ಖಾತೆಗಳಿಗೆ ಹಣ ಜಮೆಯಾಗಿದೆ. ಭೋವಿ ಅಕ್ರಮ ಹಣ ವರ್ಗಾವಣೆ ಶೋಧಿಸಿರುವ ಸಿಐಡಿ, ಐದು ಕಂಪನಿಗಳಿಗೆ 34.18 ಕೋಟಿ ರೂ. ಅಕ್ರಮವಾಗಿ ವರ್ಗಾವಣೆಯಾಗಿದೆ.
ಅಚ್ಚರಿ ಎಂದರೆ,ಈ ಹಣಕಾಸು ವರ್ಗಾವಣೆಯಾದ ಕಂಪೆನಿಗಳ ವಿಳಾಸ ಪತ್ತೆಗೆ ಹೋದ ಸಿಐಡಿ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಕೆಲವು ಕಂಪನಿಗಳ ಕಚೇರಿಗಳು ದನದ ಕೊಟ್ಟಿಗೆಯಲ್ಲಿರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ. ಕೆಲವು ಗ್ಯಾರೇಜುಗಳ ವಿಳಾಸದಲ್ಲಿ ಕಚೇರಿ ಇದೆ ಎಂದು ನಮೂದಿಸಲಾಗಿದೆ.
ಈ ಹಗರಣ ಸಂಬಂಧ ಸಿಐಡಿ ತನಿಖೆ ಎದುರಿಸಿದ್ದ ಉದ್ಯಮಿ ಜೀವಾ ಅವರು, ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದು ಅವರಿಗೆ ಸೇರಿದ್ದು ಎನ್ನಲಾದ ಅನ್ನಿಕಾ ಎಂಟರ್ ಪ್ರೈಸ್ ಕಂಪನಿಗೆ 7.16 ಕೋಟಿ ರೂ. ಹಾಗೂ ಅವರ ಸೋದರಿ ಹೆಸರಿನಲ್ಲಿರುವ ಹರ್ನಿತಾ ಕ್ರಿಯೇಷನ್ಸ್ ಕಂಪನಿಗೆ 3.79 ಕೋಟಿ ರೂ. ಸೇರಿ ಒಟ್ಟು 10.9 ಕೋಟಿ ರೂ., ನಿಗಮದ ಸಿಬ್ಬಂದಿ ಯಶಸ್ವಿನಿ ಅವರಿಗೆ ಸೇರಿದ್ದ ಎನ್ನಲಾದ ಡ್ರೀಮ್ ಎಂಟರ್ ಪ್ರೈಸಸ್ ಕಂಪನಿಗೆ 8 ಕೋಟಿ 78 ಲಕ್ಷ ರೂ. ಯಶಸ್ವಿನಿ ಸೋದರ ಕಾರ್ತೀಕ್ ಗೌಡ ಹೆಸರಿನಲ್ಲಿನ ಆದಿತ್ಯ ಎಂಟರ್ ಪ್ರೈಸಸ್ ಕಂಪನಿಗೆ 4 ಕೋಟಿ 76 ಲಕ್ಷ ಜಮೆಯಾಗಿದೆ.
ಭೋವಿ ನಿಗಮದ ಪ್ರಧಾನ ವ್ಯವಸ್ಥಾಪಕನ ಆಪ್ತ ಸಿ.ಸಂತೋಷ ಹೆಸರಿನಲ್ಲಿನ ಸೋಮನಾಥೇಶ್ವರ ಎಂಟರ್ ಪ್ರೈಸಸ್ ಕಂಪೆನಿಗೆ ಬರೋಬ್ಬರಿ 9 ಕೋಟಿ 66 ಲಕ್ಷ ರೂ. ಕಾಂತ ಒಡೆಯರ್ ಹೆಸರಿನ ನ್ಯೂ ಡ್ರೀಮ್ ಎಂಟರ್ ಪ್ರೈಸಸ್ ಕಂಪನಿ 11 ಕೋಟಿ 40 ಲಕ್ಷ ರೂ. ಪದ್ಮಾ ಎಂಬಾಕೆ ಬ್ಯಾಂಕ್ ಅಕೌಂಟ್ಗೆ ನಿಗಮ ಮತ್ತು ಬ್ಯಾಂಕ್ ಪಿಆರ್ಒ ಅಭಿಲಾಶ್ ಅವರಿಗೆ ಸೇರಿದ ಎನ್ನಲಾಗಿರುವ ಕಂಪನಿಗೆ 1 ಕೋಟಿ 26 ಲಕ್ಷ ರೂ. ಭೋವಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ ಸೋದರಿ ಮಂಗಳ ರಾಮು ಬ್ಯಾಂಕ್ ಅಕೌಂಟ್ ಗೆ 1 ಕೋಟಿ 48 ಲಕ್ಷ ರೂ. ಸಂದಾಯವಾಗಿದೆ. ಈ ಮೂಲಕ ಬರೊಬ್ಬರಿ 90 ಕೋಟಿಗೂ ಅಧಿಕ ಅವ್ಯವಹಾರ ನಡೆದಿದೆ.