ಬೆಂಗಳೂರು,ಮೇ.5-
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣ ತನಿಖೆ ಕೈಗೆತ್ತಿಕೊಂಡಿರುವ ಎಸ್ಐಟಿ ತಂಡ ಪೆನ್‌ಡ್ರೈವ್ ನಲ್ಲಿರುವ ಮಹಿಳಾ ಅಧಿಕಾರಿಗಳು ಸೇರಿದಂತೆ ಕೆಲವು ಮಹಿಳೆಯರಿಗೆ ವಿಚಾರಣೆಗೆ ಹಾಜರಾಗಲು ಅಧಿಕಾರಿಗಳು ತಿಳಿಸಿದ್ದಾರೆ
ಆದರೆ ಒಬ್ಬೊಬ್ಬರೂ, ನಾನವಳಲ್ಲ ಎನ್ನುವ ಉತ್ತರವನ್ನು ನೀಡಿದ್ದಾರೆ. ಇದರಲ್ಲಿ ಕೆಲವು ಮಹಿಳಾ ಪೊಲೀಸ್ ಅಧಿಕಾರಿಗಳು ಕೂಡ ಕಾಣಿಸಿಕೊಂಡಿದ್ದು ಅವರೂ ಕೂಡ ಅದು ನಾನಲ್ಲ, ನಾನಲ್ಲ ಎನ್ನುತ್ತಿದ್ದು ತನಿಖಾ ತಂಡಕ್ಕೆ ಮಹಿಳೆಯರ ಪತ್ತೆ ಸವಾಲಾಗಿ ಪರಿಣಮಿಸಿದೆ.
ಮಾತೊಂದಡೆಯಲ್ಲಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್‌ಡ್ರೈವ್ ವಿಡಿಯೋ ದೃಶ್ಯಗಳನ್ನು ಇಟ್ಟುಕೊಂಡು ತನಿಖೆಯನ್ನು ತೀವ್ರಗೊಳಿಸಿರುವ ಎಸ್‌ಐಟಿ ಅಧಿಕಾರಿಗಳು ಕೆಲವು ಮಹಿಳೆಯರ ಚಲನ ವಲನಗಳ ಮೇಲೆ ನಿಗಾ ಇಟ್ಟಿದ್ದಾರೆ
ಈ ವಿಡಿಯೊಗಳಲ್ಲಿ ಕಂಡ ಮುಖವನ್ನಾಧರಿಸಿ ಅವರ ಗುರುತನ್ನು ಪತ್ತೆ ಹಚ್ಚಿರುವ ಎಸ್‌ಐಟಿ ಅಧಿಕಾರಿಗಳು ಆ ಸಂತ್ರಸ್ತ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಆದರೆ, ಈಗಾಗಲೇ ಈ ಪ್ರಕರಣದಲ್ಲಿ ಸಂಪೂರ್ಣ ಮುಜುಗರವನ್ನು ಅನುಭವಿಸಿರುವ ಮಹಿಳಾ ಅಧಿಕಾರಿಗಳು ವಿಚಾರಣೆಗೆ ಹಾಜರಾಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಪೊಲೀಸ್ ಅಧಿಕಾರಿಗಳ ವಿಡಿಯೊ ಹಾಗೂ ಫೋಟೊಗಳು ಸಹ ವೈರಲ್ ಆಗಿದ್ದವು. ಇದರಿಂದ ಅವರು ತೀವ್ರ ಆಘಾತವನ್ನು ಎದುರಿಸಿದ್ದಾರೆ.
ಈಗ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರಿಂದ ಮತ್ತಷ್ಟು ಕಂಗೆಟ್ಟಿರುವ ಮಹಿಳಾ ಅಧಿಕಾರಿಗಳು, ಆ ವಿಡಿಯೊ ಹಾಗೂ ಫೋಟೊಗಳು ನಮ್ಮದಲ್ಲ. ಅದನ್ನು ಮಾರ್ಫ್ ಮಾಡಲಾಗಿದೆ ಎಂದು ನೋಟಿಸ್‌ಗೆ ಉತ್ತರ ಕೊಟ್ಟಿದ್ದಾರೆ ಎನ್ನಲಾಗಿದೆ.
ವಿಚಾರಣೆಗೆ ಹಾಜರಾಗುವ ಸಾಧ್ಯತೆ ಕಡಿಮೆ
ಒಂದು ವೇಳೆ ಈ ಮಹಿಳಾ ಅಧಿಕಾರಿಗಳು ಎಸ್‌ಐಟಿ ಮುಂದೆ ಬಂದು ತಮ್ಮ ಮೇಲೆ ಪ್ರಜ್ವಲ್ ದೌರ್ಜನ್ಯ ಮಾಡಿದ್ದಾರೆ. ಆಮಿಷವೊಡ್ಡುವ ಮೂಲಕ ಇಲ್ಲವೇ ಕಿರುಕುಳ ನೀಡುವ ಮೂಲಕ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದರೆ, ಈ ಕೇಸ್ ಮತ್ತಷ್ಟು ಬಲಿಷ್ಠವಾಗುತ್ತಿತ್ತು. ಆದರೆ, ಈಗ ಈ ಮಹಿಳಾ ಅಧಿಕಾರಿಗಳು ಆ ವಿಡಿಯೊ ಹಾಗೂ ಫೋಟೊದಲ್ಲಿರುವುದು ನಾವೇ ಅಲ್ಲ ಎಂದು ಹೇಳಿಬಿಟ್ಟಿದ್ದಾರೆ. ಹಾಗಾಗಿ ಅವರು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಕಡಿಮೆ ಇದೆ. ಒಂದು ವೇಳೆ ಎಸ್‌ಐಟಿ ಅಧಿಕಾರಿಗಳು ಅವರ ಮನವೊಲಿಕೆ ಮಾಡಿದಲ್ಲಿ ಗೌಪ್ಯ ಸ್ಥಳದಲ್ಲಿ ಹೇಳಿಕೆ ಪಡೆಯಲಿದ್ದಾರೆ ಎನ್ನಲಾಗಿದೆ.
ಇನ್ನು ಕೆಲವು ಮಹಿಳೆಯರು ತಮ್ಮ ವಾಸಸ್ಥಾನ ತೊರೆದಿದ್ದು ಅವರು ಎಲ್ಲಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚ ಬೇಕಾಗಿರುವ ಜವಾಬ್ದಾರಿ ತನಿಖಾ ತಂಡದ ಮೇಲಿದೆ. ಇದರಲ್ಲಿ ಕೆಲವು ಮಹಿಳೆಯರು ತಮ್ಮ ಭವಿಷ್ಯದ ಪ್ರಶ್ನೆ ಆಡಗಿದ್ದು ನಮ್ಮ ಪಾಡಿಗೆ ನಮ್ಮನ್ನು ಇರಲು ಬಿಟ್ಟು ಬಿಡಿ ಎಂದು ತನಿಖಾ ತಂಡದ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ ಎಂದು ಗೊತ್ತಾಗಿದೆ.

