ಬೆಂಗಳೂರು, ಆ.22:
ವಿಜ್ಞ ವಿನಾಶಕ ಗಣೇಶ ಹಬ್ಬದ ಸಮಯದಲ್ಲಿ ಉಂಟಾಗುವ ಪರಿಸರ ಮಾಲಿನ್ಯ ತಡೆಗಟ್ಟಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ನಿಟ್ಟಿನಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿ ಮತ್ತು ಹಸಿರು ಪಟಾಕಿ ಮಾತ್ರ ಉತ್ತೇಜಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು
ಅರಣ್ಯ,ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ಈ ಸಮಿತಿಗೆ ಪರಿಸರ ಮಾಲಿನ್ಯ ಉಂಟು ಮಾಡುವ ಪಿಓಪಿ ಗಣಪತಿ ಮತ್ತು ಪಟಾಕಿಗೆ ಕಡಿವಾಣ ಹಾಕುವಂತೆ ಸಲಹೆ ಮಾಡಿದರು
ಪಿಓಪಿ ಗಣೇಶ ಮೂರ್ತಿಗಳನ್ನು ನಿಯಂತ್ರಿಸುವ ದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮುಖ್ಯಕಾರ್ಯದರ್ಶಿ ಮತ್ತು ರಾಜ್ಯದ ಜಿಲ್ಲಾಧಿಕಾರಿಗಳೊಂದಿಗೆ ನಡೆದ ವಿಡಿಯೋ ಕಾನ್ಷರೆನ್ಸ್ ನಡೆಸಿದರು.
ವಯನಾಡು, ಶಿರೂರು ಮೊದಲಾದ ಕಡೆ ಗುಡ್ಡ ಕುಸಿತ ಆಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಪರಿಸರ, ಪ್ರಕೃತಿ ಉಳಿಸುವುದು ಎಲ್ಲರ ಕರ್ತವ್ಯವಾಗಿದೆ. ಸರ್ಕಾರ ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆ, ಸಾಗಾಟ, ಮಾರಾಟ, ದಾಸ್ತಾನು ನಿಷೇಧಿಸಿದ್ದು, ಹೊರರಾಜ್ಯದಿಂದ ಪಿಓಪಿ ಗಣಪತಿ ಬಾರದಂತೆ ವಾಣಿಜ್ಯ ತೆರಿಗೆ, ಸಾರಿಗೆ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಸಂಘಟಿತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಪಿಓಪಿ ಗಣೇಶವಿಗ್ರಹಗಳನ್ನು ಕ್ಯಾಲ್ಸಿಯಂ, ಸಲ್ಫೇಟ್ ಹೆಮಿಹೈಡ್ರೇಟ್ ಯುಕ್ತ ಪುಡಿಯಿಂದ ಮಾಡಲಾಗುತ್ತದೆ. ಇದರಲ್ಲಿ ಸಲ್ಫರ್, ಜಿಪ್ಸಮ್, ರಂಜಕ ಮತ್ತು ಮೆಗ್ನೀಸಿಯಮ್ ಸೇರಿದಂತೆ ಅನೇಕ ಅಂಶ ಇರುತ್ತದೆ. ಇವುಗಳಿಗೆ ಕ್ಯಾಡ್ಮಿಯಂ, ಪಾದರಸ, ಆರ್ಸೆನಿಕ್, ಸೀಸ ಮತ್ತು ಇಂಗಾಲವನ್ನು ಒಳಗೊಂಡ ರಾಸಾಯನಿಕ ಬಣ್ಣ ಲೇಪಿಸಲಾಗುತ್ತದೆ. ಇದನ್ನು ನದಿ, ಕೆರೆ, ಕಟ್ಟೆಯಲ್ಲಿ ವಿಸರ್ಜಿಸಿದರೆ ಜಲಚರಗಳು ಸಾವಿಗೀಡಾಗುತ್ತವೆ. ಜನ, ಜಾನುವಾರುಗಳು ಕಾಯಿಲೆ ಬೀಲುತ್ತಾರೆ ಎಂದು ತಿಳಿಸಿದರು.
ಸಾರ್ವಜನಿಕರ ಹಿತ ದೃಷ್ಟಿಯಿಂದ ಪರಿಸರ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇಷ್ಟು ವರ್ಷ ಸುತ್ತೋಲೆ ಮಾತ್ರ ಹೊರಡಿಸಲಾಗುತ್ತಿತ್ತು. ಕಳೆದ ವರ್ಷ ಸರ್ಕಾರ ಆದೇಶವನ್ನೇ ಹೊರಡಿಸಿದೆ. ಇದನ್ನು ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು ಎಂದರು.
ಮುಚ್ಚಳಿಕೆ ಬರೆಸಿಕೊಳ್ಳಲು ಸೂಚನೆ:
ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಗೆ ಅನುಮತಿ ನೀಡುವಾಗ ಪಿಓಪಿ ಗಣಪತಿ ಪೂಜಿಸಿ, ವಿಸರ್ಜಿಸುವುದಿಲ್ಲ, ಶಬ್ದ ಮಾಲಿನ್ಯ, ವಾಯು ಮಾಲಿನ್ಯಉಂಟು ಮಾಡುವ ಪಟಾಕಿ ಸಿಡಿಸುವುದಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಳ್ಳಿ ಎಂದು ಈಶ್ವರ ಖಂಡ್ರೆ ಸಲಹೆ ಮಾಡಿದರು.
ಗಜ ಮುಖ ಗಣಪನ ಪೂಜಿಸಿ ಜಲ ಚರಗಳ ಸಾವಿಗೆ ಕಾರಣವಾಗುವುದು ಎಷ್ಟು ಸರಿ?
ಗಜಮುಖ ಗಣಪನ ಪೂಜಿಸಿ, ಜಲಚರಗಳ ಸಾವಿಗೆ ಕಾರಣವಾಗುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಈಶ್ವರ ಖಂಡ್ರೆ, ಜೇಡಿ ಮಣ್ಣಿನಿಂದ ತಯಾರಿಸಿದ ಗೌರಿ- ಗಣಪತಿಯನ್ನೇ ಪೂಜೆ ಮಾಡಬೇಕು. ಪರಿಸರ ಉಳಿಸಬೇಕು. ಎಷ್ಟೇ ಕಾನೂನು ಇದ್ದರೂ, ಜನ ಜಾಗೃತಿ ಮೂಡಿಸಿದಾಗ ಮಾತ್ರ ಇದು ಯಶಸ್ಸು ಕಾಣುತ್ತದೆ. ಈ ನಿಟ್ಟಿನಲ್ಲಿ ವಿವಿಧ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘಗಳ ವಾಟ್ಸ್ ಅಪ್ ಗ್ರೂಪ್ ಗಳಲ್ಲಿ ಸಂದೇಶ ಕಳುಹಿಸಿ, ಕಸ ಸಾಗಿಸುವ ವಾಹನಗಳಲ್ಲಿ ಧ್ವನಿ ಪ್ರಚಾರ (ಜಿಂಗಲ್) ಹಾಕುವ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮಾತನಾಡಿ, ಪರಿಸರ ಸ್ನೇಹಿ ಗಣಪತಿ ಕೂರಿಸಿ, ಪೂಜಿಸಿ ಮಾದರಿಯಾಗುವ 3 ಗಣೇಶೋತ್ಸವ ಸಮಿತಿಗಳಿಗೆ ಪ್ರಶಸ್ತಿ ಪತ್ರ, ಬಹುಮಾನ ನೀಡುವ ಮತ್ತು ಮಣ್ಣಿನ ಗಣಪತಿ ಮಾಡುವವರಿಂದ ಶಾಲಾ, ಕಾಲೇಜು ಮಕ್ಕಳಿಗೆ ಹಾಗೂ ಯುವಕರಿಗೆ ತರಬೇತಿ ಕೊಡಿಸುವ ಯೋಜನೆ ಜಾರಿಗೆ ತರಬೇಕು ಎನ್ನುವ ಸಲಹೆಯನ್ನು ನೀಡಿದರು.
Previous Articleರಾಜ್ಯ ಸರ್ಕಾರವನ್ನು ಅಮಾನತ್ತಿನಲ್ಲಿಡಬೇಕಂತೆ
Next Article ವಾಹನ ಸವಾರರೇ ಹುಷಾರ್.