ಯುಕ್ರೇನ್ ನಲ್ಲಿ ಸೋಲಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕಕ್ಕೀಡಾದ ರಷ್ಯಾದ ಅಧ್ಯಕ್ಷ ಪುಟಿನ್ ಈಗ ಪಾಶ್ಚಾತ್ಯ ರಾಷ್ಟ್ರಗಳ ಮೇಲೆ ಅಣ್ವಸ್ತ್ರ ದಾಳಿ ಮಾಡುವ ಧಮ್ಕಿ ಹಾಕಿದ್ದಾರೆ, ಮಾತ್ರವಲ್ಲದೆ ರಷ್ಯಾದಲ್ಲಿ ದ್ವಿತೀಯ ಮಹಾಯುದ್ಧದ ನಂತರ ಪ್ರಥಮ ಬಾರಿಗೆ ಸೈನ್ಯವನ್ನು ಹೆಚ್ಚಿಸುವ ಆದೇಶವನ್ನೂ ನೀಡಿದ್ದಾರೆ. ಈ ಕಾರಣದಿಂದಾಗಿ ಮತ್ತೊಮ್ಮೆ ವಿಶ್ವದಾದ್ಯಂತ ಮಹಾಯುದ್ಧದ ಛಾಯೆ ಮೂಡುತ್ತಿದೆ.
ರಷ್ಯಾದ ಅಧ್ಯಕ್ಷ ಪುಟಿನ್ ಹತಾಶರಾಗಿದ್ದಾರೆ ಮತ್ತು ರಷ್ಯಾದ ಪರಮಾಪ್ತ ದೇಶ ಚೈನಾ ಕೂಡ ರಷ್ಯಾದ ದಾಳಿಯನ್ನು ಪ್ರಶ್ನಿಸುತ್ತಿರುವುದು ಮತ್ತು ಭಾರತ ರಷ್ಯಾದ ಜೊತೆಗಿಲ್ಲ ಎಂಬಂತೆ ನಡೆದುಕೊಳ್ಳುತ್ತಿರುವುದು ಕೂಡ ರಷ್ಯಾ ದೇಶವನ್ನು ಒಬ್ಬಂಟಿಯಾಗಿ ಮಾಡಿಬಿಟ್ಟಿದೆ. ಈ ಕಾರಣದಿಂದ ತನ್ನ ಮರ್ಯಾದೆ ಉಳಿಸಿಕೊಳ್ಳಲು ರಷ್ಯಾ ಅನ್ಯಾಯದ ಯುದ್ಧ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ರಷ್ಯಾದ ಅಧ್ಯಕ್ಷರ ನ್ಯೂಕ್ಲಿಯರ್ ಧಮ್ಕಿಯನ್ನು ಅಷ್ಟು ಸುಲಭವಾಗಿ ತಿರಸ್ಕರಿಸಲು ಸಾಧ್ಯವಿಲ್ಲ ಮತ್ತು ಇದು ಪುಟಿನ್ ಅವರ ಅಳಿವು ಉಳಿವಿನ ಪ್ರಶ್ನೆಯಾಗಿರುವುದರಿಂದ ಅವರು ಏನನ್ನು ಮಾಡಲೂ ಹೇಸುವುದಿಲ್ಲ ಆದ್ದರಿಂದ ಏನು ಬೇಕಾದರು ಸಂಭವಿಸಬಹುದು ಎನ್ನಲಾಗಿದೆ. ಈಗಲೇ ರಷ್ಯಾದಲ್ಲಿ ಸೈನ್ಯದಲ್ಲಿ ಸೇರಿರದ ಸದೃಢ ಯುವಕರನ್ನು ಸೇನೆಗೆ ಸೇರಿಸುವ ಪ್ರಕ್ರಿಯೆ ಆರಂಭವಾಗಿದೆ. ಆ ಕಾರಣದಿಂದ ಅನೇಕ ರಷ್ಯನ್ನರು ರಷ್ಯಾ ಬಿಟ್ಟು ಹೊರದೇಶಗಳಿಗೆ ತರಾತುರಿಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಎಂದೂ ವರದಿಯಾಗಿದೆ. ರಷ್ಯಾದಿಂದ ಹೊರಗೆ ಹೋಗುತ್ತಿರುವ ವಿಮಾನಗಳಲ್ಲಿ ಸೀಟ್ ಸಿಗುತ್ತಿಲ್ಲ ಮತ್ತು ಟಿಕೆಟ್ ಬೆಲೆ ಕೂಡ ಗಗನಕ್ಕೇರಿದೆ ಎಂದು ವರದಿಯಾಗಿದೆ.
ಪರಿಸ್ಥಿತಿ ವಿಕೋಪಕ್ಕೆ ಹೋದರೆ ಅದರಿಂದ ಭಾರತದ ಆರ್ಥಿಕತೆಗೂ ಬಹಳ ದೊಡ್ಡ ಹೊಡೆತವಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸುತ್ತಿದ್ದಾರೆ.