ಬೆಂಗಳೂರು, ಮೇ.7:
ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಕಿರುಕುಳ ಆರೋಪದ ಪೆನ್ ಡ್ರೈವ್ ಬಹಿರಂಗ ಪ್ರಕರಣದ ಸೂತ್ರಧಾರಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಂದು ಗಂಭೀರ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕೆಂದು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಸಕ್ತ ನಡೆಯುತ್ತಿರುವ ವಿಶೇಷ ತನಿಖಾ ತಂಡದಿಂದ ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಎಸ್ ಐ ಟಿ ಯ ಅಧಿಕಾರಿಗಳು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಈ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಸಿಗಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಈ ಪ್ರಕರಣದಿಂದ ರಾಜ್ಯದ ಘನತೆ ಮತ್ತು ಗೌರವಕ್ಕೆ ದೊಡ್ಡ ರೀತಿಯ ಹಾನಿಯಾಗಿದೆ ಎಂಬ ಕಳವಳ ತಮ್ಮನ್ನು ಕಾಡುತ್ತಿದೆ ಹೀಗಾಗಿ ನಿಸ್ಪಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಇಲ್ಲಿಯವರೆಗೆ ತನಿಖಾ ತಂಡ ಪೆನ್ ಡ್ರೈವ್ ಯಾವ ರೀತಿಯಲ್ಲಿ ಬಹಿರಂಗವಾಯಿತು ಇದನ್ನು ಬಹಿರಂಗಪಡಿಸಿದವರು ಯಾರು ಎಂಬ ಬಗ್ಗೆ ತನಿಖೆ ನಡೆಸುತ್ತಿಲ್ಲ ಸುಳ್ಳು ಅಪಹರಣ ಪ್ರಕರಣ ದಾಖಲಿಸಿ ಮಾಜಿ ಸಚಿವ ರೇವಣ್ಣ ಅವರನ್ನು ಬಂಧಿಸಿದ್ದಾರೆ ಯಾವುದೇ ನೋಟಿಸ್ ನೀಡದೆ ವಕೀಲ ದೇವರಾಜ ಗೌಡ ಅವರನ್ನು ಕರೆಯಿಸಿಕೊಂಡು ಸುಳ್ಳು ಹೇಳಿಕೆ ದಾಖಲಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ ಎಂದು ದೂರಿದರು.
ಮುಖ್ಯಮಂತ್ರಿ ಅವರಿಗೆ ಕನಿಷ್ಠ ಕಾಳಜಿ ಹಾಗೂ ನೈತಿಕತೆ ಇದ್ದರೆ ತಕ್ಷಣವೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಸಂಪುಟದಿಂದ ವಜಾ ಗೊಳಿಸಿ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕು ಇಲ್ಲವೇ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
ರಾಜಕೀಯ ಕಾರಣಕ್ಕಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಲಭ್ಯವಿರುವ ಎಲ್ಲ ವಾಮ ಮಾರ್ಗಗಳನ್ನು ಬಳಸಿ ಪೆನ್ ಡ್ರೈವ್ ಪ್ರಕರಣವನ್ನು ಸಿದ್ಧಪಡಿಸಿದ್ದಾರೆ ದೇವೇಗೌಡರ ಕುಟುಂಬವನ್ನು ಹಾಳು ಮಾಡಬೇಕೆಂಬ ಉದ್ದೇಶ ದಿಂದ ವ್ಯವಸ್ಥಿತವಾಗಿ ಇದನ್ನು ರೂಪಿಸಿದ್ದಾರೆ. ಇಂತಹ ಪಿತೂರಿಗಳನ್ನು ಮಾಡುವುದರಲ್ಲಿ ಪ್ರಕರಣಗಳನ್ನು ಸಿದ್ಧಪಡಿಸುವಲ್ಲಿ ಅವರು ಸಾಕಷ್ಟು ಅನುಭವ ಹೊಂದಿದ್ದಾರೆ ಎಂದು ವ್ಯಂಗ್ಯವಾಡಿದರು.
ಈ ಪ್ರಕರಣ ಬಹಿರಂಗಗೊಂಡ ನಂತರ ಮಾನಸಿಕವಾಗಿ ಅಧೀರ ಕೊಂಡಿರುವ ತಮ್ಮ ತಂದೆ ಹಾಗೂ ತಾಯಿಯನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದರೆ ತಮ್ಮ ಬಗ್ಗೆ ಮುಖ್ಯಮಂತ್ರಿಗಳು ವ್ಯಂಗ್ಯವಾಗಿ ಮಾತನಾಡುತ್ತಾರೆ ಇವರಿಗೆ ತಂದೆ ತಾಯಿ ಯ ಪ್ರೀತಿ ಏನು ಗೊತ್ತು ನಿಂತವರು ತಮ್ಮ ರಾಜ್ಯದ ಮುಖ್ಯಮಂತ್ರಿಯಾಗಿರುವುದು ದುರ್ದವ ಎಂದು ಕಿಡಿ ಕಾರಿದರು.
ಈ ಚುನಾವಣೆ ಮುಗಿದ ಮೇಲೆ ಬಿಜೆಪಿ ಜೊತೆಗೆ ತಮ್ಮ ಪಕ್ಷದ ಮೈತ್ರಿ ಇರುತ್ತದೆಯೋ ಇಲ್ಲವೋ ಎಂಬ ಬಗ್ಗೆ ತಾವು ತಲೆ ಕೆಡಿಸಿಕೊಂಡಿಲ್ಲ ಈ ಪ್ರಕರಣದಿಂದ ರಾಜ್ಯದ ಪ್ರತಿಷ್ಠೆಗೆ ಆಗಿರುವ ಕಳಂಕ ತೊಳೆದು ಹಾಕಬೇಕು ಎನ್ನುವುದು ತಮ್ಮ ಉದ್ದೇಶವಾಗಿದೆ, ಜೆಡಿಎಸ್ ಜೊತೆ ಮೈತ್ರಿ ಮುಂದುವರಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಬಿಜೆಪಿ ನಿರ್ಧರಿಸಬೇಕು ತಮ್ಮ ಪಕ್ಷವನ್ನು ಈ ವಿಷಯದಲ್ಲಿ ಅತ್ಯಂತ ಸ್ಪಷ್ಟವಾಗಿದ್ದು ಈ ಮೈತ್ರಿಗೆ ಮುಂದುವರಿಯಬೇಕಾಗಿದೆ ಎಂದು ಹೇಳಿದರು.