ಬೆಂಗಳೂರು.ಆ,2- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಕನಿಷ್ಟ 20ರಿಂದ 25 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ರಾಜ್ಯನಾಯಕರಿಗೆ ನೀಡಿರುವ ಹೈಕಮಾಂಡ್,ಪಕ್ಷ ಹಾಗೂ ಸರ್ಕಾರದ ವಿದ್ಯಮಾನಗಳ ಬಗ್ಗೆ ಬಹಿರಂಗ ಹೇಳಿಕೆ ನೀಡುವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಹೈಕಮಾಂಡ್ ನಾಯಕರು ರಾಜ್ಯ ಕಾಂಗ್ರೆಸ್ ನ ಪ್ರಮುಖ ನಾಯಕರು, ಮುಖ್ಯಮಂತ್ರಿ ಹಾಗೂ ಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಪಕ್ಷದ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರ ಅಸಮಧಾನ ಇದರ ಬೆನ್ನಲ್ಲೇ ಸರ್ಕಾರಿ ನೌಕರರ ವರ್ಗಾವಣೆ ಹಾಗೂ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಕುರಿತು ಕೇಳಿಬಂದ ಶಾಸಕರ ಅಸಮಧಾನದ ಹಿನ್ನೆಲೆಯಲ್ಲಿ ಈ ಸಭೆ ಆಯೋಜಿಸಲಾಗಿತ್ತು.
ಇದರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ನಾಯಕರಾದ ರಾಹುಲ್ ಗಾಂಧಿ,ಪ್ರಿಯಾಂಕಾ ಗಾಂಧಿ, ವೇಣುಗೋಪಾಲ್,ಸುರ್ಜೇವಾಲಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ, ಈವರೆಗಿನ ರಾಜಕಾರಣದಲ್ಲಿ ಕಾಂಗ್ರೆಸ್ ಅತೀ ದೊಡ್ಡ ರಾಜ್ಯಗಳ ಪೈಕಿ ರಾಜಸ್ಥಾನ ಮತ್ತು ಕರ್ನಾಟಕಗಳಲ್ಲಿ ಆಡಳಿತದಲ್ಲಿದೆ. ರಾಜಸ್ಥಾನ ಅಧಿಕಾರಾವಧಿ ಮುಗಿಯುತ್ತಿದ್ದು, ಕರ್ನಾಟಕದ ಆಡಳಿತ ಪರ್ವ ಈಗಷ್ಟೇ ಶುರುವಾಗಿದೆ.
ಕರ್ನಾಟಕದ ಗ್ಯಾರಂಟಿ ಯೋಜನೆಗಳು ದೇಶದಲ್ಲೇ ಸಂಚಲನ ಮೂಡಿಸಿವೆ. ಇಲ್ಲಿನ ಮಾದರಿ ಆಡಳಿತ ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಬೇಕು. ಈ ನಿಟ್ಟಿನಲ್ಲಿ ಪಾರದರ್ಶಕ, ಭ್ರಷ್ಟಾಚಾರ ರಹಿತ, ಜನಪರ ಆಡಳಿತ ನೀಡುವಂತೆ ತಾಕೀತು ಮಾಡಿದರು.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಮಂತ್ರಿಗಳು ಆಂತರಿಕ ಭಿನ್ನಮತಗಳನ್ನು ಕಾಲಕಾಲಕ್ಕೆ ಸರಿದೂಗಿಸಿ ಒಗ್ಗಟ್ಟು ಕಾಯ್ದುಕೊಳ್ಳಬೇಕು ಎಲ್ಲಾ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅಧಿಕಾರ ಹಂಚಿಕೆ ಅಥವಾ ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಬಹಿರಂಗ ಚರ್ಚೆಗಳಾಗಬಾರದು. ಯಾವುದೇ ಅಸಮಾಧಾನಗಳಿದ್ದರೂ ಸಚಿವ ಸಂಪುಟ ಸಭೆ ಶಾಸಕಾಂಗ ಸಭೆ ಮತ್ತು ಪಕ್ಷದ ವೇದಿಕೆಯಲ್ಲೇ ಪ್ರಸ್ತಾಪಗೊಳ್ಳಬೇಕು.ಈ ವಿಷಯಗಳ ಬಗ್ಗೆ ಬಹಿರಂಗ ಚರ್ಚೆ ಮೂಲಕ ಶಿಸ್ತು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಮುಖರಿಗೆ ಸೂಚಿಸಲಾಗಿದೆ. ಕೇಂದ್ರ ಸರ್ಕಾರದ ಬಗ್ಗೆ ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸಬೇಕು. ಕೋಮು ರಾಜಕಾರಣವನ್ನು ಯಾವುದೇ ಮುಲಾಜಿಲ್ಲದೇ ಹತ್ತಿಕ್ಕಬೇಕು. ಹೊಂದಾಣಿಕೆ ರಾಜಕಾರಣಕ್ಕೆ ಅವಕಾಶ ನೀಡಬಾರದು ಎಂದು ಸಲಹೆ ಮಾಡಿದರು ಎನ್ನಲಾಗಿದೆ.
ಹೈಕಮಾಂಡ್ ಅಂತಿಮ:
ಲೋಕಸಭೆ ಚುನಾವಣೆಯಲ್ಲಿ ಸಚಿವರನ್ನು ಕಣಕ್ಕಿಳಿಸಲು ಹೈಕಮಾಂಡ್ ನಿರ್ಧರಿಸಿದರೆ ಅದನ್ನು ಚಾಚೂ ತಪ್ಪದೇ ಪಾಲಿಸಬೇಕು. ಪಕ್ಷದ ಅಭ್ಯರ್ಥಿಯಾಗಿ ಯಾರೇ ಸ್ಪರ್ಧೆ ಮಾಡಿದರೂ
ಪ್ರಾಮಾಣಕವಾಗಿ ಚುನಾವಣೆ ನಡೆಸಿ ಗೆಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಕೆಲವು ಸಚಿವರನ್ನು ಕಣಕ್ಕಿಳಿಸಲಾಗಿತ್ತು. ಆ ಸಂದರ್ಭದಲ್ಲಿ ಗೆಲ್ಲುವ ಅವಕಾಶಗಳಿದ್ದರೂ ಸಂಪುಟದಿಂದ ಹೊರಗುಳಿಯಬೇಕಾಗುತ್ತದೆ ಎಂಬ ಕಾರಣಕ್ಕೆ ಕೆಲವರು ಉದ್ದೇಶಪೂರ್ವಕವಾಗಿ ಸೋಲು ಕಂಡಿದ್ದರು ಎಂಬ ಆರೋಪವಿದೆ. ಈ ಬಾರಿ ಅಂತಹ ಬೆಳವಣಿಗೆಗಳಾಗದಂತೆ ಎಚ್ಚರಿಕೆ ವಹಿಸಬೇಕೆಂದು ಹೈಕಮಾಂಡ್ ಸೂಚನೆ ನೀಡಿದೆ.
ಮೈತ್ರಿ ಬೇಡ:
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಇತರೆ ನಾಯಕರು
ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಮಟ್ಟಿಗೆ ಯಾವುದೇ ಪಕ್ಷಗಳ ಜೊತೆ ಹೊಂದಾಣಿಕೆ ಬೇಡ ಎಂದು ಮನವಿ ಮಾಡಿದರು ಎನ್ನಲಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಬಈ ಬಾರಿ ಚುನಾವಣೆಯಲ್ಲಿ 18 ರಿಂದ 20 ಸ್ಥಾನಗಳನ್ನು ಗೆಲ್ಲಲು ಅವಕಾಶವಿದೆ. ಕಳೆದ ಬಾರಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದಾಗಿ ಕಾಂಗ್ರೆಸ್‍ಗೆ ಭಾರೀ ಹಿನ್ನಡೆಯುಂಟಾಗಿತ್ತು. ಈ ಬಾರಿ ಅಂತಹ ಯಾವುದೇ ಮೈತ್ರಿಗಳ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದರು ಎಂದು ಗೊತ್ತಾಗಿದೆ
ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಾತ್ರ ಪ್ರಬಲ ಪಕ್ಷಗಳಾಗಿದ್ದು, ಪರಸ್ಪರ ಸ್ಪರ್ಧೆಯಿಂದಾಗಿ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗಿದೆ. ಹೀಗಾಗಿ ಯಾವುದೇ ರಾಜಕೀಯ ಪಕ್ಷದೊಂದಿಗೆ ಕರ್ನಾಟಕದ ಮಟ್ಟಿಗೆ ಮೈತ್ರಿ ಮಾಡಿಕೊಳ್ಳಬಾರದೆಂದು ರಾಜ್ಯದ ಪ್ರಮುಖ ನಾಯಕರು ಹೈಕಮಾಂಡ್‍ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ