ಬೆಂಗಳೂರು – ರಾಜ್ಯದ ಹಲವೆಡೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿ ಸಿಕ್ಕಿಬಿದ್ದಿರುವ ಐವರು ಶಂಕಿತ ಉಗ್ರರಿಂದ ಜಪ್ತಿ ಮಾಡಿರುವ ವಿದೇಶಿ ನಿರ್ಮಿತ ಲೈವ್ ಹ್ಯಾಂಡ್ ಗ್ರೆನೇಡ್ ಗಳ ಬಳಕೆ ಹೇಗೆ ಎನ್ನುವುದೇ ಬಂಧಿತರಿಗೆ ಗೊತ್ತಿರಲಿಲ್ಲ ಎನ್ನುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಕೊಡಿಗೇಹಳ್ಳಿಯ ಮನೆಯೊಂದರಲ್ಲಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ ಗ್ರೆನೇಡ್ ಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ಅವುಗಳನ್ನು ಯಾವ ದೇಶದಲ್ಲಿ ತಯಾರಿಸಲಾಗಿದೆ ಎಂಬುದನ್ನು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ಗ್ರೆನೇಡ್‌ಗಳನ್ನು ಯಾವ ದೇಶದಲ್ಲಿ ತಯಾರಿಸಲಾಗಿದೆ ಎಂಬುದನ್ನು ಪತ್ತೆ ಮಾಡುವುದು ಕಷ್ಟ. ಆದರೆ, ಈ ಗ್ರೆನೇಡ್‌ಗಳು ಪ್ರಕರಣಕ್ಕೆ ಬಲವಾದ ಸಾಕ್ಷಿಯಾಗಿವೆ ಎಂದು ತನಿಖೆಯ ಭಾಗವಾಗಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದಲ್ಲದೆ, ಬಂಧಿತ ಸೈಯದ್ ಸುಹೇಲ್ ಖಾನ್, ಮೊಹಮ್ಮದ್ ಉಮರ್, ಜಾಹಿದ್ ತಬ್ರೇಜ್, ಸೈಯದ್ ಮುದಾಸಿರ್ ಪಾಷಾ ಮತ್ತು ಮೊಹಮ್ಮದ್ ಫೈಸಲ್ ಸೇರಿ ಐವರು ಶಂಕಿತ ಉಗ್ರರಲ್ಲಿ ಯಾರೊಬ್ಬರಿಗೂ ಗ್ರೆನೇಡ್ ಅನ್ನು ಹೇಗೆ ಬಳಸಬೇಕೆಂದು ತಿಳಿದಿರಲಿಲ್ಲ ಎಂದು ತಿಳಿಸಿದ್ದಾರೆ
ಹ್ಯಾಂಡ್ಲರ್‌ಗಳ ಸೂಚನೆಯ ಮೇರೆಗೆ ಗ್ರೆನೇಡ್‌ಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದು ಆದರೆ ಅವುಗಳನ್ನು ಹೇಗೆ ಬಳಸಬೇಕು ಅಥವಾ ಇತರರು ಅವರಿಂದ ಗ್ರೆನೇಡ್‌ಗಳನ್ನು ಸ್ವೀಕರಿಸುತ್ತಾರೆಯೇ ಎಂಬ ಬಗ್ಗೆ ಯಾವುದೇ ಸುಳಿವೂ ಅವರಿಗಿರಲಿಲ್ಲ. ಹ್ಯಾಂಡ್ಲರ್‌ಗಳ ಆದೇಶಕ್ಕಾಗಿ ಕಾಯುತ್ತಿದ್ದರು. ವಿದೇಶದಿಂದ ಹಣವನ್ನೂ ಪಡೆದುಕೊಂಡಿದ್ದರು. ಶಂಕಿತರ ಬ್ಯಾಂಕ್ ಖಾತೆಗಳಿಗೆ ಆನ್‌ಲೈನ್ ಮೂಲಕ ಹಣ ವರ್ಗಾಯಿಸಲಾಗಿದೆ. ಐವರೂ ಕೆಲವು ಲಕ್ಷ ರೂಪಾಯಿಗಳನ್ನು ಸ್ವೀಕರಿಸಿದ್ದಾರೆಂದು ಹೇಳಿದ್ದಾರೆ.
ಈ ನಡುವೆ ತಲೆಮರೆಸಿಕೊಂಡಿರುವ ಪ್ರಕರಣದ ಎರಡನೇ ಆರೋಪಿ ಜುನೈದ್ ಅಹ್ಮದ್’ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಮತ್ತು ಪ್ರಸ್ತುತ ಪೊಲೀಸ್ ವಶದಲ್ಲಿರುವ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಭಯೋತ್ಪಾದಕ ನಜೀರ್ ತನಿಖೆಗೆ ಸಹಕರಿಸುತ್ತಿಲ್ಲ ಎಂದು ತಿಳಿಸಿದರು.
2008 ರ ಬೆಂಗಳೂರಿನಲ್ಲಿ ನಡೆದ ಸರಣಿ ಸ್ಫೋಟದ ಆರೋಪಿ ನಜೀರ್ ಈ ಪ್ರಕರಣದಲ್ಲೂ ಪ್ರಮುಖ ಆರೋಪಿಯಾಗಿದ್ದಾನೆ. “ಈ ಪ್ರಕರಣದಲ್ಲಿ ಇತರರು ಭಾಗಿಯಾಗಿದ್ದಾರೆಯೇ ಎಂದು ತಿಳಿಯಲು ನಾವು ನಜೀರ್‌ನನ್ನು ವಿಚಾರಣೆ ನಡೆಸಲಾಗುತ್ತಿದೆ. ಆದರೆ. ಆತ ಹೆಚ್ಚಿನ ಮಾಹಿತಿಗಳನ್ನು ಬಹಿರಂಗಪಡಿಸುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.