ಬೆಂಗಳೂರು,ಜು.26:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬದಲಿ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಧಾನಮಂಡಲದ ಉಭಯ ಸದನಗಳಲ್ಲಿ ಅಹೋ ರಾತ್ರಿಯ ಧರಣಿ ನಡೆಸುವ ಮೂಲಕ ಸದನದ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿದ ಬೆನ್ನಲ್ಲೇ ಬಿಜೆಪಿಯಲ್ಲಿನ ಆಂತರಿಕ ಸಮರ ಬಹಿರಂಗಗೊಂಡಿದೆ.
ವಿಧಾನಸಭೆಯ ಎಲ್ಲ ಕಲಾಪಗಳನ್ನು ಬದಿಗೊತ್ತಿ ನಿಳುವಳಿ ಸೂಚನೆ ಅನ್ವಯ ಈ ವಿಷಯ ಚರ್ಚೆಗೆ ಪಟ್ಟು ಹಿಡಿದು ಧರಣಿ ನಡೆಸುವ ಮೂಲಕ ಬಿಜೆಪಿ ನಾಯಕರು ಹೊಂದಾಣಿಕೆ ರಾಜಕಾರಣ ಮಾಡಿದ್ದಾರೆ ಎಂದು ಬಿಜೆಪಿಯ ನಾಯಕರೇ ಆಪಾದಿಸಿದ್ದಾರೆ.
ಪಕ್ಷದ ಹಿರಿಯ ನಾಯಕರಾದ ಬಸನಗೌಡ ಪಾಟೀಲ್ ಮತ್ತು ಅರವಿಂದ ಲಿಂಬಾವಳಿ ಅವರು ಈ ಕುರಿತಂತೆ ಬಹಿರಂಗ ಹೇಳಿಕೆ ನೀಡಿದ್ದು, ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಕರೆಯಲಾಗಿದ್ದ ಅಧಿವೇಶನ ಸದ್ಬಳಕೆ ಮಾಡಿಕೊಳ್ಳುವಲ್ಲಿ ನಾಯಕತ್ವ ವಿಫಲವಾಗಿದೆ ಎಂದು ದೂರಿದ್ದಾರೆ.
ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ಹೇಳುತ್ತಲೇ ಪಕ್ಷದ ಅಧ್ಯಕ್ಷರು ಉಪಮುಖ್ಯಮಂತ್ರಿ ಶಿವಕುಮಾರ್ ಸೇರಿದಂತೆ ಎಲ್ಲ ನಾಯಕರು ಒಂದಿಗೆ ಅತ್ಯಂತ ಅನ್ಯೋನ್ಯತೆಯೊಂದಿಗೆ ಇರುವ ಒಡನಾಟವನ್ನು ನೋಡಿದರೆ ನಾವು ಯಾಕಾಗಿ ಈ ಹೋರಾಟ ಮಾಡುತ್ತಿದ್ದೇವೆ ಎಂದು ಪ್ರಶ್ನೆ ಮೂಡುವಂತಾಗಿದೆ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಇದರ ಬೆನ್ನಲ್ಲೇ ಜಾಲತಾಣ ಎಕ್ಸ್ ನಲ್ಲಿ ಸುಧೀರ್ಘ ಹೇಳಿಕೆ ನೀಡಿರುವ ಅರವಿಂದ ಲಿಂಬಾವಳಿಯವರು ರಾಜ್ಯವನ್ನು ಕಾಣುತ್ತಿರುವ ಡೆಂಗ್ಯೂ ಕಳೆದ ಅವಧಿಯಲ್ಲಿನ ಬರ ಪರಿಹಾರ ವಿಚಾರವಾಗಿ ಯಾವುದೇ ಚರ್ಚೆ ಮಾಡಿದೆ ಸದನದಲ್ಲಿ ಬಿಜೆಪಿ ನಾಯಕರು ಕಾಲಹರಣ ಮಾಡಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.
ಐಟಿ-ಬಿಟಿ ರಾಜಧಾನಿ ಎನಿಸಿರುವ, ವಿಜ್ಞಾನ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿಯಾಗಿರುವ ಬೆಂಗಳೂರು ಸೇರಿದಂತೆ, ಅನೇಕ ಜಿಲ್ಲೆಗಳಲ್ಲಿ ಡೆಂಘೀ ತಾಂಡವವಾಡುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ನೆರೆ ಹಾವಳಿಯಿಂದ ಲಕ್ಷಾಂತರ ಜನ ಮನೆ-ಮಠ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಈ ಬಗ್ಗೆ ಬೆಳಕು ಚೆಲ್ಲಬೇಕು, ಜನರ ಸಂಕಷ್ಟಕ್ಕೆ ಕನ್ನಡಿಯಾಗಬೇಕು ಎಂದು ನಮ್ಮ ಪಕ್ಷದ ನಾಯಕರಿಗೆ ಅನಿಸದೇ ಹೋದುದು ದುರ್ದೈವ! ಪ್ರವಾಹಕ್ಕೂ ಮೊದಲು ಈ ಹಿಂದಿನ ವರ್ಷದ ಬರ ಪರಿಹಾರವೂ ಅನೇಕ ರೈತರಿಗೆ ತಲುಪಿಲ್ಲ. ಆ ಬಗ್ಗೆ ಪ್ರತಿಪಕ್ಷದ ನಾಯಕರು ಮಾತಾಡಲೇ ಇಲ್ಲ ಎಂದು ಹೇಳಿದ್ದಾರೆ.
ಶಾಸಕರೂ ಆಗಿರುವ ನಮ್ಮ ಪಕ್ಷದ ಅಧ್ಯಕ್ಷರು ಮತ್ತು ಪ್ರತಿಪಕ್ಷ ನಾಯಕರ ಮಧ್ಯೆ ಸಾಮರಸ್ಯ, ಹೊಂದಾಣಿಕೆ ಮತ್ತು ತಾಳ-ಮೇಳ ಇಲ್ಲದೇ ಹೋದದ್ದು ವಿಷಾದನೀಯ. ಇದರ ಸಂಪೂರ್ಣ ಲಾಭವನ್ನು ಆಡಳಿತ ಪಕ್ಷ ಪಡೆಯಲು ಸಹಾಯಕವಾಯಿತು. ಸಿಕ್ಕ ಅವಕಾಶ ಮತ್ತು ಸಮಯವನ್ನು ಸದನದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳದೇ, ಇಡೀ ಅಧಿವೇಶನದಲ್ಲಿ ವೃಥಾ ಕಾಲಹರಣ ಮಾಡಿ, ಇನ್ನೂ ಒಂದು ದಿನ ಬಾಕಿ ಇರುವಾಗಲೇ ಸದನದ ಕಲಾಪಗಳನ್ನು ಮೊಟಕುಗೊಳಿಸುವಲ್ಲಿ ಆಡಳಿತ ಪಕ್ಷದವರೊಂದಿಗೆ ಕೈಜೋಡಿಸಿದ ನಮ್ಮ ಪಕ್ಷದ ನಾಯಕರ ನಡೆ ಪ್ರಶ್ನಾರ್ಹ.
ಒಟ್ಟಾರೆ ಈ ಬಾರಿಯ ಅಧಿವೇಶನದಲ್ಲಿ ಪ್ರತಿಪಕ್ಷವಾಗಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಅಧಿವೇಶನದಲ್ಲಿ ನಾಯಕರ ನಡೆ ಗಮನಿಸಿದರೆ, ಮುಂದಿನ ದಿನಗಳಲ್ಲಿ ಬಿಜೆಪಿ ಜನಪರ ಹೋರಾಟಗಳಲ್ಲಿ ಹೇಗೆ ತನ್ನನ್ನು ತೊಡಗಿಸಿಕೊಳ್ಳಬಹುದು ಎಂಬುದು ನಿಷ್ಠಾವಂತ, ದೇವದುರ್ಲಭ ಕಾರ್ಯಕರ್ತರಿಗೆ ಆತಂಕದ ವಿಷಯವಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟ ಮತ್ತೊಮ್ಮೆ ಬಹಿರಂಗ.
Previous Articleಹಿಂದುಳಿದ ವರ್ಗಗಳ ವಿರೋಧಿ ಬಿಜೆಪಿ ನಾಯಕರು
Next Article Youth congress ಸದಸ್ಯತ್ವ ಬೇಕಾ..?