ಬೆಂಗಳೂರು: ಏ.23- ಅಪರಾಧಿಗಳು ಹಾಗೂ ದಂಗೆಕೋರರನ್ನು ಮಟ್ಟ ಹಾಕಲು ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇರುವ ಬುಲ್ಡೋಜರ್ ಪ್ರಯೋಗ ರಾಜ್ಯದಲ್ಲೂ ಜಾರಿ ಮಾಡುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚಿಸುವುದಾಗಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ಸಾರ್ವಜನಿಕರ ಆಸ್ತಿಪಾಸ್ತಿಗಳನ್ನು ಹಾಳು ಮಾಡುವವರಿಗೆ ಪಾಠ ಕಲಿಸಲೆಂದೇ ಉತ್ತರಪ್ರದೇಶ ಮತ್ತಿತರ ಕಡೆ ಬುಲ್ಡೋಜರ್ ಮಾದರಿಯನ್ನು ಜಾರಿ ಮಾಡಲಾಗಿದೆ. ಇದನ್ನು ರಾಜ್ಯದಲ್ಲೂ ಅನುಷ್ಠಾನ ಮಾಡುವ ಕುರಿತು ಸಿಎಂ ಜೊತೆ ಮಾತುಕತೆ ನಡೆಸುತ್ತೇನೆ ಎಂದರು.
ಯಾರು ಸಾರ್ವಜನಿಕರ ಆಸ್ತಿಯನ್ನು ಹಾಳು ಮಾಡುತ್ತಾರೋ ಅಂಥವರಿಗೆ ವಾಸಿಸಲು ಮನೆಯೂ ಕೂಡ ಇರಬಾರದು. ಇವರಿಗೆ ತಕ್ಕ ಪಾಠ ಕಲಿಸಲು ಸರ್ಕಾರ ಸಿದ್ದವಿದೆ. ಘಾತುಕಶಕ್ತಿಗಳನ್ನು ಮಟ್ಟ ಹಾಕಿಯೇ ತೀರುತ್ತೇವೆ ಎಂದು ಗುಡುಗಿದರು.
ಉತ್ತರಪ್ರದೇಶ, ಮಧ್ಯಪ್ರದೇಶದಲ್ಲಿ ದಂಗೆಕೋರರವ ವಿರುದ್ಧ ಅಲ್ಲಿನ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ನಮ್ಮಲೂ ಕೂಡ ಇದು ಜಾರಿಯಾಗಬೇಕೆಂಬುದು ಬಹುತೇಕರ ಅಭಿಪ್ರಾಯವಾಗಿದೆ ಎಂದರು.
ಹುಬ್ಬಳ್ಳಿ ದಾಂಧಲೆಕೋರರ ಜತೆ ವಿದೇಶಿಗರ ಜತೆ ನಂಟಿರಬಹುದು. ಹಿಜಾಬ್ ವಿಚಾರವೂ ಮೊದಲು ವಿದೇಶಿ ಚಾನಲ್‍ಗಳಲ್ಲಿ ಪ್ರಸಾರವಾಯಿತು ಇಲ್ಲಿದ್ದುಕೊಂಡು ಪಾಕಿಸ್ತಾನ ಪರ ಜೈ ಎನ್ನುವವರನ್ನು ಸಹಿಸಲು ಸಾಧ್ಯವಿಲ್ಲ. ನಾವು ಎಲ್ಲರನ್ನೂ ಅನುಮಾನದಿಂದ ನೋಡುವುದಿಲ್ಲ. ಆದರೆ ಕೆಲವರು ಒಳ್ಳೆಯವರೂ ಇದ್ದಾರೆ ಎಂದರು.
ಜಾರಿಗೆ ಬರಲಿ: ಮತ್ತೊಂದೆಡೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್
ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ಪದೇ ಪದೇ ಸಾರ್ವಜನಿಕರ ಆಸ್ತಿಪಾಸ್ತಿಗಳನ್ನು ನಷ್ಟ ಮಾಡುವವರ ಆಸ್ತಿಯನ್ನು ಮುಟುಗೋಲು ಹಾಕಿಕೊಂಡು ದಂಗೆ ನಿಯಂತ್ರಿಸಲು ಬುಲ್ಡೋಜರ್ ಕಾನೂನನ್ನು ಜಾರಿಗೆ ತರಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಮಾಜದಲ್ಲಿ ಆಸ್ತಿ ನಾಶ, ಸರ್ಕಾರಿ ಕಚೇರಿ, ಪೊಲೀಸ್ ಠಾಣೆಗೆ ಬೆಂಕಿ ಹಾಕುವುದು, ನಾಗರಿಕರಲ್ಲಿ ಮತ್ತು ಪೊಲೀಸರಲ್ಲಿ ಆತ್ಮಸ್ಥೈರ್ಯ ಕುಂದಿಸುವ ಕೆಲಸಗಳು ಭಯೋತ್ಪಾದನೆ ಚಟುವಟಿಕೆಗಳಿಗೆ ಸಮ ಎಂದು ಹೇಳಿದರು. ಯಾರು ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಾರೋ ಅಂಥವರ ಆಸ್ತಿಯನ್ನು ಮುಟುಗೋಲು ಹಾಕಿಕೊಳ್ಳಬೇಕು. ಇದು ತಪ್ಪೇನೂ ಅಲ್ಲ. ಇದಕ್ಕಾಗಿ ಬುಲ್ಡೋಜರ್ ಕಾನೂನು ಜಾರಿಗೆ ತರಬೇಕೆಂದು ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಒತ್ತಾಯಿಸುವುದಾಗಿ ತಿಳಿಸಿದರು.
ಗುಜರಾತ್, ಉತ್ತರಪ್ರದೇಶ, ಮಧ್ಯಪ್ರದೇಶಗಳಲ್ಲಿ ಗಲಭೆ ನಿಯಂತ್ರಣಕ್ಕೆ ಕಠಿಣವಾದ ಕಾನೂನುಗಳಿವೆ. ಇದರಲ್ಲಿ ಯಾವುದೇ ಜಾತಿಮತ ಪಂಥಗಳ ಬೇಧವಿಲ್ಲ. ಇಂದು ರಾಜಕೀಯ ಪ್ರೇರಿತ ಗಲಭೆಗಳು ಹೆಚ್ಚಾಗುತ್ತಿವೆ ಎಂದರು. ಚುನಾವಣಾ ವರ್ಷ ಆಗಿರುವುದರಿಂದ ಕೆಲವು ಸಮಾಜಘಾತುಕ ಶಕ್ತಿಗಳು ಗಲಭೆಗಳನ್ನು ಸೃಷ್ಟಿ ಮಾಡುತ್ತಾರೆ. ಇದರ ವಿರುದ್ಧ ಕಠಿಣವಾದ ಕಾನೂನುಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ. ಯಾರೇ ಇರಲಿ ದಂಗೆಕೋರರ ಆಸ್ತಿಯನ್ನು ಮುಟುಗೋಲು ಹಾಕಿಕೊಂಡರೂ ತಪ್ಪಿಲ್ಲ ಎಂದು ಅಭಿಪ್ರಾಯಪಟ್ಟರು.