ಬೆಂಗಳೂರು,ಫೆ.18:
ಮುಂಬರುವ ಬೇಸಿಗೆಯಲ್ಲಿ ರಾಜ್ಯದಲ್ಲಿ ವಿದ್ಯುತ್ತಿಗೆ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೇಸಿಗೆಯಲ್ಲಿ ವಿದ್ಯುತ್‌ಗೆ ಶೇ 5ರಿಂದ 10 ರಷ್ಟು ಬೇಡಿಕೆ ಹೆಚ್ಚಾಗಿದೆ. ವಿದ್ಯುತ್ ಕೊರತೆ ನೀಗಿಸಲು ಉತ್ತರಪ್ರದೇಶ ಹಾಗೂ ಪಂಜಾಬ್‌ಗಳಿಂದ ವಿನಿಮಯ ಯೋಜನೆಯಡಿ ಖರೀದಿಗೆ ನಿರ್ಧರಿಸಲಾಗಿದೆ ಎಂದು ಹೇಳಿದರು.
ಬೇಸಿಗೆಯಲ್ಲಿ ಉತ್ತರಪ್ರದೇಶ ಹಾಗೂ ಪಂಜಾಬ್ ರಾಜ್ಯದಿಂದ ಪಡೆದ ವಿದ್ಯುತ್ ಅನ್ನು ಜೂನ್ ಬಳಿಕ ಮರಳಿ ನೀಡಲಾಗುತ್ತದೆ. ಈ ಕುರಿತು ಹಲವು ಸುತ್ತಿನ ಚರ್ಚೆಗಳು ನಡೆದಿವೆ. ಕಳೆದ ವರ್ಷ ಬರ ಪರಿಸ್ಥಿತಿ ತಲೆದೋರಿದಾಗಲೂ ಕೃಷಿ ಪಂಪ್‌ಸೆಟ್‌ಗಳಿಗೆ ಒಂದು ಗಂಟೆ ಮಾತ್ರ ವಿದ್ಯುತ್ ಕಡಿತ ಮಾಡಲಾಗಿತ್ತು. ಪ್ರಸಕ್ತ ವರ್ಷ ರಾಜ್ಯದ ಯಾವ ಭಾಗದಲ್ಲಿ ಕೂಡ ಲೋಡ್‌ಶಡ್ಡಿಂಗ್ ಇಲ್ಲ. ಕೃಷಿ ಪಂಪ್ ಸೆಟ್‌ಗಳಿಗೆ 7 ಗಂಟೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ’ ಎಂದು ವಿವರಿಸಿದರು.
ವಿದ್ಯುತ್ ದರ ಏರಿಕೆ ಗೆ ಸಂಬಂಧಿಸಿದಂತೆ ಎಲ್ಲ ‘ಎಸ್ಕಾಂ’ಗಳು ಪ್ರತಿ ವರ್ಷ ಪ್ರಸ್ತಾವ ಸಲ್ಲಿಕೆ ಮಾಡುತ್ತವೆ. ಕೆಇಆರ್‌ಸಿ ಸಾರ್ವಜನಿಕ ಅಹವಾಲು ಆಲಿಸಿ ನಿರ್ಧಾರ ಕೈಗೊಳ್ಳುತ್ತದೆ. ಕಳೆದ ವರ್ಷ ವಿದ್ಯುತ್ ದರ ಏರಿಕೆ ಮಾಡಿಲ್ಲ. ಕೆಇಆರ್‌ಸಿ ಸೂಚನೆ ಮೇರೆಗೆ ಸರ್ಕಾರದ ನಿರ್ಧಾರ ಹೊರಬೀಳಲಿದೆ ಎಂದರು.
ಟೆಂಡರ್ ರದ್ದು:
ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ಪೂರೈಸಲು ಫೀಡರ್ ಹಂತದ ಸೌರ ವಿದ್ಯುತ್ ಘಟಕ ನಿರ್ಮಿಸುವ ಉದ್ದೇಶದಿಂದ ರೂಪಿಸಿದ ‘ಕುಸುಮ್-ಸಿ’ ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಇಲ್ಲವಾದರೆ ಟೆಂಡರ್ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕುಸುಮ್-ಸಿ’ ಯೋಜನೆಯಡಿ ರಾಜ್ಯದಲ್ಲಿ 3 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಪ್ರತಿ ಯೂನಿಟ್ ವಿದ್ಯುತ್‌ಗೆ 7 ವೆಚ್ಚವಾಗುತ್ತಿದೆ. ಸೌರ ಶಕ್ತಿ ಬಳಕೆಯಿಂದ ವಿದ್ಯುತ್ ಉತ್ಪಾದನಾ ವೆಚ್ಚ ಅರ್ಧದಷ್ಟು ಕಡಿಮೆಯಾಗಲಿದೆ. ಕೃಷಿ ಉದ್ದೇಶಕ್ಕೆ ರೈತರಿಗೆ ನಿರಂತರವಾಗಿ ವಿದ್ಯುತ್ ಪೂರೈಕೆ ಆಗಲಿದೆ. ಇಂತಹ ಯೋಜನೆಯ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.
‘ಕುಸುಮ್-ಸಿ ಯೋಜನೆಗೆ ರಾಜ್ಯದಲ್ಲಿ 774 ಎಕೆರೆ ಭೂಮಿಯ ಅಗತ್ಯವಿದೆ. ಇದರಲ್ಲಿ 320 ಎಕರೆ ಸರ್ಕಾರಿ ಹಾಗೂ 380 ಎಕರೆ ಖಾಸಗಿ ಭೂಮಿ ಗುರುತಿಸಲಾಗಿದೆ. ಘಟಕ ನಿರ್ಮಾಣದ ಹೊಣೆ ಹೊತ್ತಿರುವ ಕಂಪೆನಿಗಳು ಆಸಕ್ತಿ ವಹಿಸಿ ಭೂಮಿ ಪಡೆದುಕೊಳ್ಳಬೇಕು ಎಂದು ತಾಕೀತು ಮಾಡಿದರು.
Previous Articleಹೈಕಮಾಂಡ್ ಗೆ ಯತ್ನಾಳ್ ಹೇಳಿದ್ದೇನು ಗೊತ್ತೆ..
Next Article ಅಂಗನವಾಡಿ ಮಕ್ಕಳ ಆಹಾರಕ್ಕೆ ಕನ್ನ