ಕರ್ನಾಟಕದಲ್ಲಿರುವ ಬಿಜೆಪಿ ಆಡಳಿತ ರಾಜ್ಯವನ್ನು ಭ್ರಷ್ಟಾಚಾರದ ರಾಜಧಾನಿಯನ್ನಾಗಿ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‍ಐ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಈ ಮೊದಲು ಗೃಹ ಸಚಿವರೇ ಹೇಳಿದ್ದರು. ಬಳಿಕ ತನಿಖೆಗೆ ಆದೇಶಿಸಿದ್ದಾರೆ. ಈಗ ತನಿಖಾಧಿಕಾರಿಗಳು ಬಿಜೆಪಿಯ ಮುಖಂಡನನ್ನೇ ಬಂಧಿಸಿದ್ದಾರೆ. ಈ ಹಿಂದೆ ಗೃಹ ಸಚಿವರು ಆ ವ್ಯಕ್ತಿಯ ಮನೆಗೆ ಭೇಟಿ ನೀಡಿದ್ದರು ಎಂದು ಆಪಾದಿಸಿದರು.
ಪಿಎಸ್‍ಐಗಳ ನೇಮಕಾತಿಗೆ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಪರೀಕ್ಷೆ ಬರೆದಿದ್ದರು. 21 ಪ್ರಶ್ನೆಗಳಿಗೆ ಉತ್ತರಿಸಿರುವವನ್ನು 76ನೇ ರ್ಯಾಂಕ್ ಪಡೆದಿದ್ದಾನೆ. ನಕಲು ಮಾಡಿಸಲಾಗಿದೆ. ಬ್ಲೂಟೂತ್ ಬಳಸಿ ಪರೀಕ್ಷೆ ಬರೆಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪಿಎಸ್‍ಐಗಳಿಗೆ ಹೆಚ್ಚಿನ ಅಧಿಕಾರವಿರುತ್ತದೆ. ಅಂಥವರ ನೇಮಕಾತಿಯಲ್ಲೇ ಹಗರಣ ನಡೆದಿದೆ. ಕೆಲಸ ಗಿಟ್ಟಿಸಿಕೊಳ್ಳಲು ಹಲವಾರು ಮಂದಿ ಆಸ್ತಿ ಮಾರಿ ಲಂಚ ನೀಡಿದ್ದಾರೆ ಎಂದು ವಿವರಿಸಿದರು.
ನಾನು ಮತ್ತು ಪ್ರಿಯಾಂಕ ಖರ್ಗೆ ಪಿಎಸ್‍ಐ ಪರೀಕ್ಷಾ ಅಭ್ಯರ್ಥಿಗಳ ಜೊತೆ ಚರ್ಚೆ ನಡೆಸಿದವು. ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಅನ್ಯಾಯವಾಗಿದೆ. ಈ ಮೊದಲು ಪ್ರಭಾವ ಇದ್ದವರಿಗೆ ಒಂದಿಷ್ಟು ಹೆಚ್ಚು ಅಂಕಗಳನ್ನು ನೀಡುವ ಪರಿಪಾಠವನ್ನು ಕೇಳುತ್ತಿದ್ದೆವು. ಆದರೆ ಪಿಎಸ್‍ಐ ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವೇ ನಡೆದಿದೆ. ಕರ್ನಾಟಕವನ್ನು ಭ್ರಷ್ಟಾಚಾರದ ರಾಜಧಾನಿ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Previous Articleರಘುನಂದನ್ ರಾಮಣ್ಣ ಅವರಿಗೆ ರಾಹುಲ್ ಗಾಂಧಿ ಅಭಿನಂದನೆ
Next Article ದಿಂಗಾಲೇಶ್ವರ ಶ್ರೀಗಳು ಹೇಳಿದ್ದು ಏನು?