ಬೆಂಗಳೂರು,ಆ.4:
ಕಂದಾಯ, ನಗರಾಭಿವೃದ್ಧಿ, ಸಮಾಜ ಕಲ್ಯಾಣ ಲೋಕೋಪಯೋಗಿ ಮತ್ತು ಆರೋಗ್ಯ ಇಲಾಖೆ ಸೇರಿದಂತೆ ಕೆಲವು ಇಲಾಖೆಗಳ ಮಂತ್ರಿಗಳು ತಮ್ಮ ಇಲಾಖೆಯ ಕಾರ್ಯವೈಖರಿ ಸುಧಾರಿಸಿಕೊಳ್ಳಬೇಕು ಇಲ್ಲವಾದರೆ ಕ್ರಮ ಜರುಗಿಸುವುದು ಅನಿವಾರ್ಯವಾಗಲಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ ನೀಡಿದೆ.
ರಾಜ್ಯ ಸರ್ಕಾರದ ಅನೇಕ ಮಂತ್ರಿಗಳು ನಿರೀಕ್ಷಿತ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ ಹಲವರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ. ಕೆಲವು ಮಂತ್ರಿಗಳು ತಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಅನೇಕ ಮಂದಿ ಶಾಸಕರು ದೂರು ನೀಡಿರುವ ಹಿನ್ನೆಲೆಯಲ್ಲಿ ದಿಢೀರ್ ಬೆಂಗಳೂರಿಗೆ ದೌಡಾಯಿಸಿದ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ಸುರ್ಜೆವಾಲ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸಮ್ಮುಖದಲ್ಲಿ ಮಂತ್ರಿಗಳ ಕಾರ್ಯವೈಖರಿ ಪರಿಶೀಲನೆ ನಡೆಸಿದರು.
ಹೈಕಮಾಂಡ್ ನೀಡಿರುವ ಪಟ್ಟಿಯಲ್ಲಿರುವ ಮಂತ್ರಿಗಳನ್ನು ಕರೆಯಿಸಿಕೊಂಡ ಇಬ್ಬರು ನಾಯಕರು ಅವರ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ ಮತ್ತು ವಿಳಂಬ ಗತಿಯ ಧೋರಣೆ ಕುರಿತಂತೆ ಮಾಹಿತಿ ಪಡೆದುಕೊಂಡರು.
ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದೂವರೆ ವರ್ಷ ಪೂರ್ಣಗೊಳಿಸುತ್ತಿರುವ ಸಮಯದಲ್ಲಿ ಕೆಲವು ಸಚಿವರು ತಮ್ಮ ಇಲಾಖೆಯಲ್ಲಿ ಚುರುಕಿನಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವರ ಕಾರ್ಯವೈಖರಿಯ ಬಗ್ಗೆ ಶಾಸಕರು ಮತ್ತು ಪಕ್ಷದ ಕಾರ್ಯಕರ್ತರು ನೀಡಿರುವ ದೂರಿನ ಅಂಶಗಳನ್ನು ಎಳೆ ಎಳೆಯಾಗಿ ಸಭೆಯಲ್ಲಿ ವಿವರಿಸಿ ತರಾಟೆಗೆ ತೆಗೆದುಕೊಂಡರು ಎಂದು ಹೇಳಲಾಗಿದೆ.
ಸಚಿವರ ನಿರ್ಲಕ್ಷ ಧೋರಣೆಯಿಂದಾಗಿ ಅವರ ಇಲಾಖೆಯಲ್ಲಿ ಕೆಲವು ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಮತ್ತೆ ಕೆಲವು ಮಂತ್ರಿಗಳ ಕುಟುಂಬ ಸದಸ್ಯರು ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ವಿಷಯವನ್ನು ಗಮನಕ್ಕೆ ತಂದ ಈ ಇಬ್ಬರು ನಾಯಕರು ತಿದ್ದಿಕೊಳ್ಳದೆ ಹೋದರೆ ಕ್ರಮ ಜರುಗಿಸುವುದು ಅನಿವಾರ್ಯವಾಗಲಿದೆ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ನಿರ್ದಿಷ್ಟವಾಗಿ ಕೆಲವು ಮಂತ್ರಿಗಳ ಹೆಸರು ಉಲ್ಲೇಖಿಸಿದ ಈ ಇಬ್ಬರು ನಾಯಕರು ಇನ್ನು ಮೂರು ತಿಂಗಳ ಒಳಗಾಗಿ ತಮ್ಮ ಕಾರ್ಯ ವೈಖರಿ ಸುಧಾರಿಸದೆ ಹೋದಲ್ಲಿ ಸಂಪುಟದಿಂದ ಕೈಬಿಡುವಂತೆ ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿರುವುದಾಗಿ ಗೊತ್ತಾಗಿದೆ.
Previous Articleಬೆಂಗಳೂರು ಪೊಲೀಸರಿಗೆ ಟೋಪಿ ಹಾಕುವ ಯತ್ನ.
Next Article ಸಿಎಂ ಮತ್ತು ಡಿಸಿಎಂ ಬೆಂಬಲಕ್ಕೆ ನಿಂತ ಹೈಕಮಾಂಡ್.