ಬೆಂಗಳೂರು:ಮನೆಗಳಿಗೆ ಬೀಗ ಹಾಕಿಕೊಂಡು ಹೊರಗೆ ಹೋಗುವಾಗ ಮಾಲೀಕರು ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ನಾಗರೀಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬಂಡೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸಿರುವುದನ್ನು
ಪತ್ರಿಕಾಗೋಷ್ಠಿಯಲ್ಲಿ ವಿವರಿಸಿ ನಾಗರೀಕರಲ್ಲಿ ಜಾಗೃತಿಗೆ ವಿನಂತಿಸಿಕೊಂಡರು.
ಮನೆಯ ಕೀಗಳನ್ನು ಹೂಕುಂಡ, ಚಪ್ಪಲಿ ಬಾಕ್ಸ್, ಕಿಟಕಿ ಪಕ್ಕ ಹಾಗೂ ಇನ್ನಿತರ ಕಡೆಗಳಲ್ಲಿ ಇಟ್ಟು ಹೋಗಬೇಡಿ ಇದರಿಂದ ಸುಲಭವಾಗಿ ಕೀಗಳನ್ನು ಪತ್ತೆ ಹಚ್ಚಿ ಬಾಗಿಲು ತೆಗೆದು ಹಣ-ಆಭರಣ ದೋಚಿಕೊಂಡು ಹೋಗುತ್ತಾರೆ. ಆದ್ದರಿಂದ ಕೀಗಳನ್ನು ಆದಷ್ಟು ನೀವೇ ಜತೆಯಲ್ಲಿ ತೆಗೆದುಕೊಂಡು ಹೋಗಿ ಎಂದು ಆಯುಕ್ತರು ವಿನಂತಿಸಿಕೊಂಡರು.
ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಗಿಯುತ್ತಿದ್ದು, ಬೇಸಿಗೆ ರಜೆ ಬರುತ್ತಿದೆ. ಆದ್ದರಿಂದ ಬೆಂಗಳೂರು ನಗರದಲ್ಲಿ ವಾಸಿಸುವ ಕೆಲವು ಪೋಷಕರು ಮಕ್ಕಳಿಗೆ ರಜೆ ಇರುವುದರಿಂದ ಮನೆಗಳಿಗೆ ಬೀಗ ಹಾಕಿ ತಮ್ಮ ಸ್ವಂತ ಊರುಗಳಿಗೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಮನೆಕಳವು ಆಗಬಹುದು.
ಆದ್ದರಿಂದ ಮನೆಗಳಿಗೆ ಬೀಗ ಹಾಕಿ ಹೊರ ಊರಿಗೆ ಹೋಗುವಾಗ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಹೋಗಿ. ನಮ್ಮ ಪೊಲೀಸರು ನಿಮ್ಮ ಮನೆಗಳಲ್ಲಿ ಕಳ್ಳತನವಾಗದಂತೆ ನೋಡಿಕೊಳ್ಳುತ್ತಾರೆ ಎಂದು ದಯಾನಂದ ತಿಳಿಸಿದರು.
ಅವರು ನಿಮ್ಮ ಮನೆಗಳಿಗೆ ಸರಿಯಾದ ಬೀಗಗಳನ್ನು ಹಾಕಿಕೊಂಡು ಸುರಕ್ಷಿತವಾಗಿ ಕಾಪಾಡಿಕೊಳ್ಳಿ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.