ಬೆಂಗಳೂರು,ಆ.16-
ರಾಜಧಾನಿ ಮಹಾನಗರ ಬೆಂಗಳೂರಿನಲ್ಲಿ ಎದೆ ಝಲ್ಲೆನಿಸುವ ಹೃದಯ ವಿದ್ರಾವಕ ಘಟನೆ ನಡೆದಿದೆ
ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿ ಇಬ್ಬರು ಮಕ್ಕಳೊಂದಿಗೆ ಒಂದೇ ಕುಟುಂಬದ ನಾಲ್ವರು ಸೇರಿ ಐವರು ಸಜೀವ ದಹನವಾಗಿದ್ದಾರೆ.
ಕರ್ನಾಟಕ ಶಕ್ತಿ ಕೇಂದ್ರ ವಿಧಾನಸೌಧದ ಕೂಗಳತೆ ದೂರದಲ್ಲಿರುವ ಹಲಸೂರು ಗೇಟ್ ಪೋಲಿಸ್ ಠಾಣೆ ವ್ಯಾಪ್ತಿಯ ನಗರ್ತಪೇಟೆಯಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.
ದುರ್ಘಟನೆಯಲ್ಲಿ ಸಜೀವ ದಹನವಾಗಿರುವವರನ್ನು ಮದನ್ (38), ಪತ್ನಿ ಸಂಗೀತಾ (33) ಮಿತೇಶ್ (8), ವಿಹಾನ್ (5) ಎಂದು ಗುರುತಿಸಲಾಗಿದೆ. ಈ ಎಲ್ಲರೂ ಒಂದೇ ಕುಟುಂಬದವರಾಗಿದ್ದು, ಮತ್ತೊಂದು ಮಹಡಿಯಲ್ಲಿದ್ದ ಸುರೇಶ್ ಎಂಬವರೂ ಸುಟ್ಟು ಕರಕಲಾಗಿದ್ದಾರೆ.
ನಗರ್ತಪೇಟೆಯ ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಮುಂಜಾನೆ 3.30ರ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ನಿಂದ ಅಂಗಡಿಯಲ್ಲಿ ಬೆಂಕಿ ಹೊತ್ತಿಕೊಂಡು ಈ ದುರ್ಘಟನೆ ಸಂಭವಿಸಿದೆ.
ಸಂದೀಪ್ ಮತ್ತು ಬಾಲಕೃಷ್ಣ ಎಂಬುವವರ ಒಡೆತನದ ಒಟ್ಟು ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ನೆಲಮಹಡಿ ಸೇರಿ ಎರಡು ಮಹಡಿಯಲ್ಲಿ ಗೋಡೌನ್ ಇದೆ.ಈ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಮೊದಲ ಮಹಡಿಯಲ್ಲಿ ಮಲಗಿದ್ದ ಕಾರ್ಮಿಕ ಸುರೇಶ್ ಸಜೀವ ದಹನಗೊಂಡಿದ್ದಾರೆ.
ಮೂರನೇ ಮಹಡಿಯಲ್ಲಿ ಮದನ್ ಕುಮಾರ್ ಪತ್ನಿ ಸಂಗೀತಾ, ಮಕ್ಕಳಾದ ವಿಹಾನ್ ಹಾಗೂ ನಿತೇಶ್ ವಾಸವಿದ್ದರು. ಘಟನೆಯಲ್ಲಿ ಎಲ್ಲರೂ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಭೇಟಿ ನೀಡಿ ಪರಿಶೀಲಿಸಿದರು .ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾತ್ರಿ 2.30ರ ಸುಮಾರಿಗೆ ಅಗ್ನಿ ಅವಗಢ ಸಂಭವಿಸಿದ ಮಾಹಿತಿ ಬಂದಿದೆ.ತಕ್ಷಣವೇ ಅಗ್ನಿಶಾಮಕ ದಳದವರು ನಮ್ಮ ಪೊಲೀಸರು ಪರಿಶೀಲನೆ ಮಾಡಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ.
ನೆಲಮಹಡಿಯಲ್ಲಿರುವ ಗೋಡೌನ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಅದು ಮೇಲಿನ ಮಹಡಿಗಳಿಗೆ ಆವರಿಸಿದೆ. ಬೆಂಕಿ ಹೊತ್ತಿಕೊಂಡ ಕೂಡಲೇ ಕಟ್ಟಡದಲ್ಲಿದ್ದ ಬಹುತೇಕ ಜನ ಓಡಿ ಹೋಗಿದ್ದಾರೆ. ಆದರೆ ಒಂದು ಕುಟುಂಬದ ನಾಲ್ವರು ಮತ್ತೊಬ್ಬ ಸೇರಿ ಐವರು ಕೆನ್ನಾಲಿಗೆಗೆ ಸಿಲುಕಿಕೊಂಡಿದ್ದಾರೆ.ಮೃತದೇಹಗಳನ್ನು ಈಗಾಗಲೇ ಹೊರ ತೆಗೆಯಲಾಗಿದೆ. ಅಗ್ನಿಶಾಮಕ ಸಿಬ್ಬಂದಿ, ವಿಧಿವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳು ಹಾಗೂ ನಮ್ಮ ರಕ್ಷಣಾ ತಂಡದವರು ಕಾರ್ಯಾಚರಣೆ ಕೈಗೊಂಡಿದ್ದರು ಎಂದು ಹೇಳಿದರು.
ಕೆ.ಆರ್ ಮಾರ್ಕೆಟ್ ಬಳಿಯ ನಗರ್ತಪೇಟೆಯ ವಾಣಿಜ್ಯ ಕಟ್ಟಡದಲ್ಲಿದ್ದ ಮಹಡಿ ಮನೆಯಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿ ಸ್ಥಳದಲ್ಲಿ ಅಂಬುಲೆನ್ಸ್‌ಗಳನ್ನ ನಿಯೋಜನೆ ಮಾಡಲಾಗಿತ್ತಾದರೂ ಅದರೊಳಗೆ ಸಿಲುಕಿದ್ದ ಎಲ್ಲರೂ ಸಜೀವ ದಹನಗೊಂಡಿದ್ದಾರೆ.
Previous Articleಸ್ಪೋಟಕ್ಕೆ ಬೆಚ್ಚಿದ ಬೆಂಗಳೂರು
Next Article ದರ್ಶನ್ ಯಾವ ಜೈಲಿಗೆ ಹೋಗ್ತಾರೆ ಗೊತ್ತಾ?