ಬೆಂಗಳೂರು
ರಾಜ್ಯದ ಹಲವೆಡೆ ಮಳೆ ಅಬ್ಬರಿಸುತ್ತಿದೆ.ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆ ಸಾಕಷ್ಟು ಅವಾಂತರವನ್ನೇ ಸೃಷ್ಟಿಸಿದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ನಗರದಲ್ಲಿ ಮಂಗಳವಾರವೂ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಬೆಂಗಳೂರು ನಗರ ಜಿಲ್ಲೆಯ ಎಲ್ಲ ಶಾಲೆ ಹಾಗೂ ಪಿಯುಸಿ ಕಾಲೇಜುಗಳಿಗೆ ನಾಳೆ ರಜೆ ಘೋಷಿಸಲಾಗಿದೆ.
ಮಕ್ಕಳ ಸುರಕ್ಷತೆಗಾಗಿ ರಜೆ ನೀಡಲಾಗಿದೆ ಎಂದು ನಗರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ಧಾರೆ.
ಸಂಜೆ ಜಿಟಿ ಜಟಿ ಎಂಬಂತೆ ಆರಂಭಗೊಂಡ ಮಳೆ ಕತ್ತಲಾಗುತ್ತಿದ್ದಂತೆ ಧೋ ಎಂದು ಸುರಿಯಲಾರಂಭಿಸಿತು. ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿ, ಚಂದಾಪುರ, ಸೂರ್ಯಸಿಟಿಯಲ್ಲಿ ಮಳೆಯಿಂದ ವಾಹನ ಸವಾರರು ಪರದಾಡಿದರು. ಮಳೆಯಿಂದಾಗಿ ಮಲ್ಲೇಶ್ವರಂನ 8ನೇ ಕ್ರಾಸ್‌ನಲ್ಲಿ ಮರದ ಕೊಂಬೆ ಧರೆಗುರುಳಿದೆ. ಕೊಂಬೆ ಬಿದ್ದ ಪರಿಣಾಮ ರಸ್ತೆ ಬದಿ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ. ಕಾರಿನಲ್ಲಿ ಯಾರೂ ಇಲ್ಲದಿದ್ದರಿಂದ ಅನಾಹುತ ತಪ್ಪಿದೆ.
ಆರ್ ಆರ್ ನಗರದ ಬಲರಾಂ ಲೇಔಟ್‌ನಲ್ಲಿ ಬೈಕ್, ಕಾರುಗಳು ಜಲಾವೃತಗೊಂಡಿವೆ. ಬಾಣಸವಾಡಿಯ ಐಟಿಸಿ ಫ್ಯಾಕ್ಟರಿ ಬಳಿ ಮರದ ಕೊಂಬೆ ಧರೆಗುರುಳಿದೆ. ಕೆ.ಆರ್.ಮಾರ್ಕೆಟ್-ಚಿಕ್ಕಪೇಟೆ ರಸ್ತೆ ಜಲಾವೃತವಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ. ಶಿವಾನಂದ ಸರ್ಕಲ್, ನಾಯಂಡಹಳ್ಳಿ, ಲಗ್ಗೆರೆ ಸೇರಿದಂತೆ ನಗರದ ಬಹುತೇಕ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತಿದೆ.
ಮಳೆಯಿಂದ ರಸ್ತೆಗಳು ಕೆರೆಯಂತಾಗಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ.
ಬಿ ಬಿ ಎಂ ಪಿ ಯ ಕಾಲ್ ಸೆಂಟರ್ ಗೆ ದೂರುಗಳ ಪ್ರವಾಹವೇ ಬಂದಿದ್ದು ಅದನ್ನು ನಿಭಾಯಿಸಲು ಅಧಿಕಾರಿಗಳು ಪರದಾಡುತ್ತಿದ್ದಾರೆ.
Previous Articleಕೋವಿಡ್ ಹೆಚ್ಚಳ – ಮಾಸ್ಕ್ ಕಡ್ಡಾಯ..
Next Article ಬೋರು ಹೊಡೆಸಲೆಂದೇ ಮಾಡಿದಂತಿರುವ ಲೈಗರ್