ಸಿ.ಡಿ. ಪ್ರಕರಣದಲ್ಲಿ ನನ್ನ ವಿರುದ್ಧದ ಷಡ್ಯಂತ್ರದಲ್ಲಿ ಭಾಗಿಯಾಗಿದ್ದ ತಂಡವೇ ಈಗ ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧವೂ ಕೆಲಸ ಮಾಡಿದೆ. ಹೀಗಾಗಿ, ಅವರು ಯಾವುದೇ ಕಾರಣಕ್ಕೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬಾರದು’ ಎಂದು ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಪ್ರಕರಣದಲ್ಲಿ ಏನಾಗಿದೆ ಎನ್ನುವುದು ನನಗೆ ಸಂಪೂರ್ಣ ಗೊತ್ತಿದೆ. ನಾನು ಉಸ್ತುವಾರಿ ಸಚಿವ ಆಗಿದ್ದಾಗಿನಿಂದಲೂ ನೋಡಿದ್ದೇನೆ. ಈ ಪ್ರಕರಣದಲ್ಲಿ ರಾಜಕಾರಣ ಮಾಡಲಾಗುತ್ತಿದೆ. ನಿಜವಾದ ಸಂಗತಿಯನ್ನು ಶೀಘ್ರವೇ ಬಹಿರಂಗಪಡಿಸುತ್ತೇನೆ’ ಎಂದು ಹೇಳಿದರು.
‘ಸಾಯುವಂತಹ ಕಾರಣ ಇರಲಿಲ್ಲ. ಅವರು ಕೆಲ ದಿನಗಳ ಹಿಂದೆಯಷ್ಟೆ ಹಿಂಡಲಗಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗೇಶ ಮನ್ನೋಳಕರ ಅವರಿಗೆ ಕರೆ ಮಾಡಿ, ಶೀಘ್ರದಲ್ಲೇ ರಮೇಶ ಜಾರಕಿಹೊಳಿ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಾಗಲಿದ್ದಾರೆ. ಆಗ ನನ್ನೆಲ್ಲ ಸಮಸ್ಯೆ ಪರಿಹಾರವಾಗಲಿದೆ ಎಂದು ಹೇಳಿಕೊಂಡಿದ್ದ. ಹೀಗಿರುವಾಗ ಅವನೇಕೆ ಸಾಯುತ್ತಾನೆ?’ ಎಂದು ಕೇಳಿದರು. ಕರೆ ಮಾಡಿದ್ದನ್ನು ಪಕ್ಕದಲ್ಲೇ ಇದ್ದ ನಾಗೇಶ ಒಪ್ಪಿಕೊಂಡರು.
‘ಈ ಪ್ರಕರಣ ಹಾಗೂ ನನ್ನ ವಿರುದ್ಧದ ಸಿ.ಡಿ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಇದರಲ್ಲಿರುವ ಮಹಾನಾಯಕ, ಮಹಾ ನಾಯಕಿ ಯಾರು ಎನ್ನುವುದು ಹೊರಗೆ ಬರುತ್ತದೆ. ಈಗ ಯಾರ ಹೆಸರನ್ನೂ ಹೇಳುವುದಕ್ಕೆ ಬಯಸುವುದಿಲ್ಲ ಎಂದರು