ಅಹಮದಾಬಾದ್,ಆ.8-
ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಖಚಿತ ಮಾಹಿತಿಯನ್ನು ಆದರೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೆಡ್ರೋನ್ ತಯಾರಿಕಾ ಘಟಕದ ಮೇಲೆ ಹಠಾತ್ ದಾಳಿ ನಡೆಸಿ 800 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಖಚಿತವಾದ ಮಾಹಿತಿಯ ಆಧಾರದ ಮೇಲೆ ಮಹಾರಾಷ್ಟ್ರದ ಭಿವಂಡಿ ಪಟ್ಟಣದ ಅಪಾರ್ಟ್‍ಮೆಂಟ್ ಮೇಲೆ ದಾಳಿ ನಡೆಸಿ ಅಲ್ಲಿ ಮಾದಕ ವಸ್ತು ತಯಾರಿಸಿ ಸರಬರಾಜು ಮಾಡುತ್ತಿದ್ದ ಆರೋಪದ ಮೇಲೆ ಮೊಹಮ್ಮದ್ ಯೂನಸ್ ಶೇಖ್ (41) ಹಾಗೂ ಆತನ ಸಹೋದರ ಮೊಹಮ್ಮದ್ ಆದಿಲ್ ಶೇಖ್ (34) ಸೇರಿ ಇಬ್ಬರನ್ನು ಬಂಧಿಸಿದ್ದಾರೆ .
ಬಂಧಿತರಿಂದ 800 ಕಿಲೋಗ್ರಾಂಗಳಷ್ಟು ಮೆ-ಡ್ರೋನ್ (ಎಂಡಿ ಡ್ರಗ್ಸ್) ನೊಂದಿಗೆ ಜಪ್ತಿ ಮಾಡಲಾಗಿದೆ.
ದ್ರವ ರೂಪದಲ್ಲಿರುವ ಈ ಮಾದಕ ವಸ್ತುವಿನ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದರ ಮೌಲ್ಯ800 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಗುಜರಾತ್‍ನ ಭರೂಚ್ ಜಿಲ್ಲೆಯ ಔಷಧಿಯ ಕಾರ್ಖಾನೆಯೊಂದರಲ್ಲಿ ಇದೇ ರೀತಿಯ ಕಾರ್ಯಾಚರಣೆ ನಡೆಸಿದ್ದು, 31 ಕೋಟಿ ಮೌಲ್ಯದ ದ್ರವ ಟ್ರಾಮಾಡೋಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಎರಡೂ ಸ್ಥಳಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ, ಎಟಿಎಸ್ ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ (ಎನ್‍ಡಿಪಿಎಸ್) ಕಾಯ್ದೆಯಡಿಯಲ್ಲಿ ನಿಷೇಧಿಸಲಾದ ಈ ಮಾದಕ ವಸ್ತುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿರುವ ನಾಲ್ವರನ್ನು ಬಂಧಿಸಿದೆ ಎಂದು ಉಪ ಪೊಲೀಸ್ ಮಹಾ ನಿರೀಕ್ಷಕ ಸುನೀಲ್ ಜೋಶಿ ತಿಳಿಸಿದ್ದಾರೆ.
ನಮ್ಮ ತನಿಖೆಯಲ್ಲಿ ಇಬ್ಬರು ಸಹೋದರರು ವಿವಿಧ ರಾಸಾಯನಿಕಗಳನ್ನು ಬಳಸಿ ಮೆ-ಡ್ರೋನ್ ತಯಾರಿಸಲು ಸುಮಾರು ಎಂಟು ತಿಂಗಳ ಹಿಂದೆ ಫ್ಲಾಟ್ ಅನ್ನು ಬಾಡಿಗೆಗೆ ಪಡೆದಿದ್ದರು ಎಂದು ತಿಳಿದುಬಂದಿದೆ.
ಕಳೆದ ಜುಲೈ 18 ರಂದು, ಎಟಿಎಸ್ ಸೂರತ್ ನಗರದ ಪಲ್ಸಾನಾ ಪ್ರದೇಶದಲ್ಲಿ ಮೆಡ್ರೋನ್ ತಯಾರಿಕಾ ಘಟಕವನ್ನು ಭೇದಿಸಿತ್ತು ಮತ್ತು 51.4 ಕೋಟಿ ಮೌಲ್ಯದ ಡ್ರಗ್ಸ್ ಮತ್ತು ಕಚ್ಚಾ ವಸ್ತುಗಳನ್ನು ವಶಪಡಿಸಿಕೊಂಡಿತ್ತು, ಆ ಸ್ಥಳದಿಂದ ಮೂವರನ್ನು ಸಹ ಬಂಧಿಸಲಾಗಿದೆ ಎಂದು ಅವರು ಹೇಳಿದರು. ಅವರ ವಿಚಾರಣೆಯ ವೇಳೆ, ಮಹಾರಾಷ್ಟ್ರದ ಶೇಖ್ ಸಹೋದರರೂ ಡ್ರಗ್ ಕಾರ್ಟೆಲ್‍ನ ಭಾಗವಾಗಿದ್ದರು ಎಂದು ಮೂವರು ಬಹಿರಂಗಪಡಿಸಿದ್ದಾರೆ ಎಂದು ಅವರು ಹೇಳಿದರು.
ಮತ್ತೊಂದು ಕಾರ್ಯಾಚರಣೆಯಲ್ಲಿ, ಸಂಸ್ಥೆಯು ಭರೂಚ್ ಜಿಲ್ಲೆಯ ದಹೇಜ್ ಕೈಗಾರಿಕಾ ಪ್ರದೇಶದಲ್ಲಿನ ಔಷಧಿಯ ಘಟಕದ ಮೇಲೆ ದಾಳಿ ನಡೆಸಿತು ಮತ್ತು 31 ಕೋಟಿ ಮೌಲ್ಯದ ದ್ರವ ಟ್ರಾಮಾಡೋಲ್‍ನೊಂದಿಗೆ ಇಬ್ಬರನ್ನು ಬಂಧಿಸಿದೆ ಎಂದು ಜೋಶಿ ಹೇಳಿದರು. ಬಂಧಿತರನ್ನು ಪಂಕಜ್ ರಜಪೂತ್ ಮತ್ತು ನಿಖಿಲ್ ಕಪೂರಿಯಾ ಎಂದು ಗುರುತಿಸಲಾಗಿದೆ.