ಬೆಂಗಳೂರು,ಏ.4-
ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ನಟಿ ಹಾಗೂ ಹಿರಿಯ ಪೊಲೀಸ್ ಅಧಿಕಾರಯ ಮೇಲೆ ಮಗಳು ರನ್ಯಾ ರಾವ್ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಸ್ಪೋಟಕ ಮಾಹಿತಿಗಳನ್ನು ಕೇಂದ್ರ ಕಂದಾಯ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ.
ವಿದೇಶಗಳಿಂದ ವ್ಯವಸ್ಥಿತವಾಗಿ ಚಿನ್ನ ಕಳ್ಳ ಸಾಗಾಣಿಕೆ ಮಾಡುತ್ತಿರುವ ನಟಿ, ಕಳೆದ ಮೂರು ತಿಂಗಳಲ್ಲಿ ಬರೋಬ್ಬರಿ 49.6 ಕಿಲೋ ಚಿನ್ನ ಕಳ್ಳ ಸಾಗಾಣಿಕೆ ಮಾಡಿ ಅದನ್ನು ವ್ಯಾಪಾರಿಗಳಿಗೆ ನೀಡಿದ್ದಾರೆ.
ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಡಿಆರ್‌ಐ ರಿಮ್ಯಾಂಡ್ ಅರ್ಜಿ ಸಲ್ಲಿಸಿದೆ.ಈ ಪ್ರಕರಣದಲ್ಲಿ ಚಿನ್ನಕಳ್ಳಸಾಗಣೆ, ಹಣ ವರ್ಗಾವಣೆ ಮತ್ತು ಚಿನ್ನದ ಮಾರಾಟವನ್ನು ಹೇಗೆ ಮಾಡಿದ್ದಾರೆ ಎಂಬುದನ್ನು ಅರ್ಜಿಯಲ್ಲಿ ವಿವರಿಸಿದೆ.
2024ರ ನವೆಂಬರ್‌ನಿಂದ 2025ರ ಫೆಬ್ರುವರಿ ನಡುವೆ ರನ್ಯಾ ನಾಲ್ಕು ಬಾರಿ ಕಳ್ಳಸಾಗಣೆ ಮಾಡಿದ್ದು, ಒಟ್ಟು 49.6 ಕೆ.ಜಿ.ಯಷ್ಟು ಚಿನ್ನವನ್ನು ದುಬೈನಿಂದ ಬೆಂಗಳೂರಿಗೆ ತಂದಿದ್ದಾರೆ. ಅಷ್ಟೂ ಚಿನ್ನವನ್ನು ಸಾಹಿಲ್ 40.07 ಕೋಟಿಗೆ ಮಾರಾಟ ಮಾಡಿ, ಅದರಲ್ಲಿ 38.35 ಕೋಟಿಯನ್ನು ಹವಾಲಾ ಮೂಲಕ ದುಬೈಗೆ ಕಳುಹಿಸಿದ್ದಾರೆ. ಉಳಿದ 1.72 ಕೋಟಿಯನ್ನು ರನ್ಯಾಗೆ ನೀಡಲಾಗಿದೆ ಎಂಬ ಅಂಶ ಸಾಹಿಲ್ ವಿಚಾರಣೆ ವೇಳೆ ಗೊತ್ತಾಗಿದೆ’ ಎಂದು ಡಿಆರ್‌ಐ ತಿಳಿಸಿದೆ.
2024ರ ನವೆಂಬರ್‌ನಲ್ಲಿ ರನ್ಯಾ ಕಳ್ಳಸಾಗಣೆ ಮೂಲಕ 8.9 ಕೆ.ಜಿ. ಚಿನ್ನ ತಂದಿದ್ದು, ಸಾಹಿಲ್ ಅದನ್ನು 6.82 ಕೋಟಿಗೆ ಮಾರಾಟ ಮಾಡಿದ್ದಾರೆ. ಅದರಲ್ಲಿ 6.50 ಕೋಟಿಯನ್ನು ಹವಾಲಾ ಮೂಲಕ ದುಬೈಗೆ ಕಳುಹಿಸಿ, ಉಳಿದ 32 ಲಕ್ಷವನ್ನು ರನ್ಯಾಗೆ ನೀಡಿದ್ದಾರೆ.
ಡಿಸೆಂಬರ್‌ನಲ್ಲಿ12.6 ಕೆ.ಜಿ. ಚಿನ್ನ ತಂದು, ಅದನ್ನು 9.90 ಕೋಟಿಗೆ ಮಾರಲಾಗಿದೆ. ಅದರಲ್ಲಿ 9.60 ಕೋಟಿ ದುಬೈಗೆ ಹೋಗಿದ್ದರೆ, 30 ಲಕ್ಷ ರನ್ಯಾಗೆ ಪಾವತಿಯಾಗಿದೆ’ ಎಂದು ವಿವರಿಸಿದೆ.
2025ರ ಜನವರಿಯಲ್ಲಿ ರನ್ಯಾ ಕಳ್ಳಸಾಗಣೆ ಮೂಲಕ ತಂದಿದ್ದ 14.5 ಕೆ.ಜಿ. ಬಂಗಾರವನ್ನು, 11.55 ಕೋಟಿಗೆ ಮಾರಾಟ ಮಾಡಲಾಗಿದೆ. ಅದರಲ್ಲಿ ₹55 ಲಕ್ಷವನ್ನು ರನ್ಯಾಗೆ ನೀಡಿ, 11 ಕೋಟಿಯನ್ನು ದುಬೈಗೆ ಕಳುಹಿಸಲಾಗಿದೆ. ಫೆಬ್ರುವರಿಯಲ್ಲೂ ಹೀಗೆಯೇ 13.4 ಕೆ.ಜಿ. ಚಿನ್ನವನ್ನು 11.80 ಕೋಟಿಗೆ ಮಾರಾಟ ಮಾಡಿದ್ದಾರೆ. ಅದರಲ್ಲಿ 11.25 ಕೋಟಿಯನ್ನು ದುಬೈಗೆ ಕಳುಹಿಸಿದ್ದು, 55 ಲಕ್ಷ ರನ್ಯಾಗೆ ಹೋಗಿದೆ’ ಎಂದು ಡಿಆರ್‌ಐ ವಿವರಿಸಿದೆ.