ಬೆಂಗಳೂರು, ಜೂ 14:
ಸಹಾಯ ಕೇಳಲು ಬಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಪೋಕ್ಸೊ ಪ್ರಕರಣ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆದಷ್ಟು ಬೇಗ ಬಂದು ಅವರಾಗಿಯೇ ವಿಚಾರಣೆಗೆ ಹಾಜರಾದರೆ ಒಳ್ಳೆಯದು, ಇಲ್ಲವಾದರೆ ಪೊಲೀಸರೇ ಕರೆತರುತ್ತಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಪ್ರಕರಣದ ಕುರಿತು ವಿಚಾರಣೆಗೆ ಬರುವಂತೆ ಹಲವಾರು ನೋಟೀಸ್ ನೀಡಿದರೂ ವಿಚಾರಣೆಗೆ ಬಂದಿಲ್ಲ ಎಂದು ಹೇಳಿದರು
ಈಗಾಗಲೇ ಕೊಟ್ಟಿರುವ ನೋಟೀಸ್‌ಗೆ ಉತ್ತರ ಕೊಟ್ಟಿರುವ ಯಡಿಯೂರಪ್ಪ, ತಾವು ದೆಹಲಿಗೆ ಭೇಟಿ ನೀಡುತ್ತಿದ್ದು, 17 ರಂದು ವಾಪಸ್ ಬರುವುದಾಗಿ ತಿಳಿಸಿದ್ದಾರೆ.ಈ ನಡುವೆ, ವಿರುದ್ಧ ಬಂಧನದ ವಾರೆಂಟ್ ಜಾರಿಯಾಗಿದೆ. ಹೀಗಾಗಿ ಪೊಲೀಸರು
ಅವರನ್ನು ಕರೆತಂದು, ಕಾನೂನು ಪ್ರಕಾರ ಮಾಹಿತಿ ಪಡೆದು ಮುಂದಿನ ಕ್ರಮಗಳನ್ನು ಜರುಗಿಸುತ್ತಾರೆ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ದೊಡ್ಡವರಿದ್ದಾರೆ.ವಿ.ವಿ.ಐ.ಪಿ. ಆಗಿರುವುದರಿಂದ ಯಾವುದೇ ತಪ್ಪಾದರೂ ಪೊಲೀಸರೇ ಹೊಣೆಯಾಗಬೇಕಾಗುತ್ತದೆ. ಆ ಕಾರಣಕ್ಕಾಗಿ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದಾರೆ. ಸಾಕ್ಷ್ಯಾಧಾರಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿ ವರದಿಗಳನ್ನು ಕಾಯಲಾಗುತ್ತಿತ್ತು. ಈಗ ಆ ಪ್ರಕ್ರಿಯೆಗಳು ಮುಗಿದಿವೆ. ನಿಯಮಾನುಸಾರ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ರಾಹುಲ್‌ಗಾಂಧಿಯವರು ಬೆಂಗಳೂರಿಗೆ ಬಂದಾಗ ವಿಮಾನನಿಲ್ದಾಣದಲ್ಲಿ ಸೂಚನೆ ನೀಡಿದ್ದಾರೆ ಎಂಬ ಟೀಕೆಗಳಿಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಸುಮನೆ ಕಥೆ ಕಟ್ಟಿದರೆ ಪ್ರಯೋಜನವಿಲ್ಲ. ಇದು ಇಲ್ಲಿಯ ಸಮಸ್ಯೆ. ಅವರೆಲ್ಲಾ ಹಸ್ತಕ್ಷೇಪ ಮಾಡುವುದಿಲ್ಲ . ಯಾರ ಒತ್ತಡವೂ ಇದರಲ್ಲಿ ಇಲ್ಲ ಎಂದರು.
ರಾಜಕೀಯವಿಲ್ಲ.:
ಮತ್ತೊಂದೆಡೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್, ಪೋಕ್ಸೋ ಪ್ರಕ್ರರಣ ಅತ್ಯಂತ ಸೂಕ್ಷ ಹಾಗೂ ಗಂಭೀರವಾಗಿದ್ದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾನೂನು ಇದರಲ್ಲಿ ಯಾವುದೇ ರಾಜಕೀಯ ಮಾಡುತ್ತಿಲ್ಲ ಎಂದು ಹೇಳಿದರು.
ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಏನಾದರೂ ಅಹಿತಕರ ಘಟನೆಗಳು ನಡೆದರೆ ಇದು ಪೋಕ್ಸೋ ಕಾಯ್ದೆ ವ್ಯಾಪ್ತಿಗೆ ಬರುತ್ತದೆ. ಇದರಲ್ಲಿ ಯಾವುದೇ ಸರ್ಕಾರ ಹಾಗೂ ಪಕ್ಷ ಹಸ್ತಕ್ಷೇಪ ಮಾಡಲು ಬರುವುದಿಲ್ಲ. ಪೊಲೀಸರು ತನ್ನದೇ ಆದ ತನಿಖೆಯನ್ನು ಮಾಡತ್ತಾರೆ ಎಂದರು.
ಚಿತ್ರದುರ್ಗ ಮುರುಘಾಶರಣರ ಮೇಲೆ ಪೋಕ್ಸೋ ಕಾಯ್ದೆ ಮೇಲೆ ಬಂಧನ ಮಾಡಿದ್ದು ಏನಾಯಿತು ಗೊತ್ತು. ಹೀಗಾಗಿ ಪೋಕ್ಸೋ ಕಾಯ್ದೆ ಹಿನ್ನೆಲೆಯಲ್ಲಿ ನ್ಯಾಯಾಲಯ ಬಂಧನದ ವಾರಂಟ್ ಜಾರಿ ಮಾಡಿದೆ. ಕೋರ್ಟ್ ನಿರ್ದೇಶನ ಮೇರೆಗೆ ಪೊಲೀಸರು ದೂರು ದಾಖಲು ಮಾಡಿದ್ದಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.
ಪೊಲೀಸ್ ಶೋಧ:
ಮತ್ತೊಂದೆಡೆ ಯಡಿಯೂರಪ್ಪ ವಿರುದ್ಧ ವಾರಂಟ್ ಜಾರಿಯಾದ ಹಿನ್ನೆಲೆಯಲ್ಲಿ ಆರೋಪಿಯ ಬಂಧನಕ್ಕೆ ಶೋಧ ತೀವ್ರಗೊಳಿಸಿರುವ ಸಿಐಡಿ ಪೊಲೀಸರು ಶಿವಮೊಗ್ಗ ಮತ್ತು ಬೆಂಗಳೂರು ಸೇರಿದಂತೆ ಹಲವೆಡೆ ಯಡಿಯೂರಪ್ಪ ಅವರಿಗಾಗಿ ತಲಾಷ್ ನಡೆಸಿದ್ದಾರೆ.
ಅವರು ದೆಹಲಿಯಲ್ಲಿದ್ದಾರೆ ಎಂಬ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳ ತಂಡ ಬಿಎಸ್‌ವೈ ಪುತ್ರ ಸಂಸದ ಬಿ.ವೈ.ರಾಘವೇಂದ್ರ ಅವರ ಮನೆ ಕರ್ನಾಟಕ ಭವನ ಸೇರಿದಂತೆ ಹಲವೆಡೆ ನಿನ್ನೆ ಹುಡುಕಾಟ ನಡೆಸಿದ್ದರೂ ಯಡಿಯೂರಪ್ಪ ಸಿಕ್ಕಿರಲಿಲ್ಲ.
ಅವರಿಗಾಗಿ ಹುಡುಕಾಟ ಮುಂದುವರೆಸಿದ ಸಿಐಡಿ ತಂಡ ಶಿವಮೊಗ್ಗದ ಸಂಸದರ ನಿವಾಸ, ಯಡಿಯೂರಪ್ಪ ನಿವಾಸ, ಕಚೇರಿ ಸೇರಿದಂತೆ ಹಲವೆಡೆ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿಲ್ಲ.
Previous Articleಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುವುದಿಲ್ಲವಂತೆ.
Next Article ನೈಸರ್ಗಿಕ ಸಂಪತ್ತಿನ ಹಿತಮಿತ ಬಳಕೆಗೆ ಈಶ್ವರ ಖಂಡ್ರೆ ಕರೆ.