ಬೆಂಗಳೂರು: ಶೋಕಾಸ್ ನೋಟಿಸ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೊಡುವ ಉತ್ತರವನ್ನು ಗಮನಿಸಿ ಮುಂದಿನ ನಿರ್ಧಾರ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ತಿಳಿಸಿದರು.
ರಾಜ್ಯ ಕೋರ್ ಕಮಿಟಿ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯತ್ನಾಳ್ ವರ್ಸಸ್ ವಿಜಯೇಂದ್ರ ಅಥವಾ ಯತ್ನಾಳ್ ವರ್ಸಸ್ ಬಿಜೆಪಿ ಎಂಬುದು ಕರ್ನಾಟಕದಲ್ಲಿ ಇಲ್ಲ ಎಂದು ತಿಳಿಸಿದರು.
ಶಾಸಕ ಯತ್ನಾಳ್ ಅವರಿಗೆ ಪಕ್ಷದಿಂದ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ನಾವು ಅವರ ಉತ್ತರದ ನಿರೀಕ್ಷೆಯಲ್ಲಿದ್ದೇವೆ ಎಂದು ಪತ್ರಕರ್ತರು ಪದೇ ಪದೇ ಪ್ರಶ್ನಿಸಿದಾಗ ರಾಧಾಮೋಹನ್ ದಾಸ್ ಅಗರವಾಲ್ ಉತ್ತರ ನೀಡಿದರು. ಯತ್ನಾಳ್ ಅವರಿಂದ ಉತ್ತರ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ಪಕ್ಷ ನಿರ್ಧರಿಸುತ್ತದೆ ಎಂದು ಹೇಳಿದರು.
ನಾನು ಬಿಜೆಪಿಯ ಬದ್ಧತೆಯುಳ್ಳ ಕಾರ್ಯಕರ್ತ. ಕರ್ನಾಟಕದಲ್ಲಿ ನಮ್ಮ ಪಕ್ಷದ 71 ಲಕ್ಷ ಕಾರ್ಯಕರ್ತರಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ಅವರದ್ದೇ ಆದ ವ್ಯಕ್ತಿತ್ವ ಇರುತ್ತದೆ. ಅವರ ವ್ಯಕ್ತಿತ್ವ ಸರಿಯೇ ಅಥವಾ ತಪ್ಪೇ ಎಂಬುದಕ್ಕೆ ಸಮಯವೇ ಉತ್ತರ ಕೊಡಲಿದೆ. ಪಕ್ಷದ ನಾಯಕತ್ವ ಬದಲಾವಣೆಯ ಅಧಿಕಾರ ತಳಮಟ್ಟದ ಕಾರ್ಯಕರ್ತರ ಅಥವಾ ರಾಷ್ಟ್ರೀಯ ನಾಯಕರ ಬಳಿ ಇದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ತಿಳಿಸಿದರು.