ಬೆಂಗಳೂರು, ಅ.7 – ರಾಜಧಾನಿ ಮಹಾನಗರಿ ಬೆಂಗಳೂರು ಹೊರವಲಯದಲ್ಲಿ ಎದೆ ಝಲ್ಲೆನೆಸಿದ ಭೀಕರ ಅಗ್ನಿ ದುರಂತ ಸಂಭವಿಸಿದೆ. ಪಟಾಕಿ ದಾಸ್ತಾನು ಮಳಿಗೆ ಅಗ್ನಿ ಅಲಾಹುತದಿಂದ ಧಗದಗಿಸಿ ಹೊತ್ತಿ ಉರಿದಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಕ್ಕ 12 ಮಂದಿ ಸುಟ್ಟು ಕರಕಲಾಗಿದ್ದಾರೆ.
ದಸರಾ ಹಾಗೂ ದೀಪಾವಳಿ ಹಿನ್ನೆಲೆಯಲ್ಲಿ ಬೆಂಗಳೂರು ಹೊರವಲಯದಲ್ಲಿ (Attibele) ಪಟಾಕಿ ಮಾರಾಟ ಮಳಿಗೆ ಮತ್ತು ದಾಸ್ತಾನು ಮಳಿಗೆಗಳು ಕಾರ್ಯಾರಂಭ ಮಾಡುವುದು ಪ್ರತಿ ವರ್ಷದ ವಾಡಿಕೆ.ಅಂತೇಯೇ ಈ ಬಾರಿ ಪಟಾಕಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಹೀಗಾಗಿ ಹೊಸೂರು ರಸ್ತೆಯ ಹಲವೆಡೆ ಪಟಾಕಿ ಮಳಿಗೆಗಳು ತಲೆ ಎತ್ತಿವೆ.
ಅದರಂತೆ ಗಡಿ ಪ್ರದೇಶವಾದ ಅತ್ತಿಬೆಲೆಯಲ್ಲಿ ಹಲವು ಮಳಿಗೆಗಳಿವೆ.ಇಂತಹ ಮಳಿಗೆಯೊಂದಕ್ಕೆ
ತಮಿಳುನಾಡಿನಿಂದ ಬಂದ ಪಟಾಕಿಯನ್ನು ಲಾರಿಯಿಂದ ಇಳಿಸುವ ವೇಳೆ ಬೆಂಕಿ ಹೊತ್ತಿಕೊಂಡಿದೆ. ಕ್ಷಣ ಮಾತ್ರದಲ್ಲೇ ಇದು ದಳ್ಳುರಿಯಾಗಿದ್ದು,ಅದರಲ್ಲಿ ಸಿಲುಕಿದ12 ಮಂದಿ ಸುಟ್ಟು ಕರಕಲಾಗಿದ್ದಾರೆ. ಇನ್ಮೂ 8 ಮಂದಿ ತೀವ್ರವಾದ ಸುಟ್ಟ ಗಾಯಗಳಿಂದ ಆಸ್ಪತ್ರೆ ಸೇರಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಪಟಾಕಿ ದಾಸ್ತಾನು ಮಳಿಗೆ ನಾಲ್ಕೈದು ತಾಸಿನಿಂದ ಹೊತ್ತಿ ಉರಿದಿದ್ದು,ಬೆಂಕಿ ಇನ್ನೂ ನಿಯಂತ್ರಿಸಲು ಅಗ್ನಿ ಶಾಮಕ ದಳದ ಹತ್ತಕ್ಕೂ ಹೆಚ್ಚು ವಾಹನಗಳು ಹಾಗೂ ಹತ್ತಾರು ಸಿಬ್ಬಂದಿ ಪ್ರಯತ್ನಿಸಿದರು.
ಮಳಿಗೆಯಲ್ಲಿ ಸುಮಾರು ಐದು ಕೋಟಿ ಮೌಲ್ಯದ ಪಟಾಕಿಗಳ ಸಂಗ್ರಹ ಇತ್ತು ಎನ್ನಲಾಗಿದೆ. ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಪಟಾಕಿ ಮಳಿಗೆಯಲ್ಲಿ 30-40 ಮಂದಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಹಿಂಬಾಗಿಲಿನಿಂದ ಹೊರಬಂದಿದ್ದರಿಂದ ಕೆಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಹಲವರು ಒಳಗಡೆ ಸಿಲುಕಿರುವ ಶಂಕೆ ಇದೆ.
ದಾಸ್ತಾನು ಮಳಿಗೆ, ಒಂದು ಲಾರಿ, ಒಂದು ಸರಕು ಸಾಗಣೆ ಮತ್ತು ನಾಲ್ಕು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ. ಘಟನಾ ಸ್ಥಳದಲ್ಲಿ ಪಟಾಕಿಗಳು ಇನ್ನೂ ಸಿಡಿಯುತ್ತಿದ್ದು, ಸುತ್ತಲೂ ದಟ್ಟವಾದ ಬೆಂಕಿ ಮತ್ತು ಹೊಗೆ ಆವರಿಸಿತ್ತು.
ಪಟಾಕಿ ಮಳಿಗೆ ಮಾಲೀಕ ಸೇರಿ ಐವರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ನಾಲ್ಕೈದು ಆಂಬುಲೆನ್ಸ್‌ಗಳು ಬಂದಿವೆ.
ವಾಹನ ದಟ್ಟಣೆ: ಘಟನೆಯಿಂದ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಭಾರಿ ಸಂಖ್ಯೆಯ ಜನ ಜಮಾಯಿಸಿದ್ದರು. ಇದರಿಂದ ವಾಹನ ಸಂಚಾರ ನಾಲ್ಕೈದು ಗಂಟೆಗಳ ಕಾಲ ಅಸ್ತವ್ಯಸ್ಥವಾಯಿತು. ಬೆಂಗಳೂರಿನಿಂದ ತಮಿಳುನಾಡಿನ ಹೊಸೂರುನಿತ್ತ ತೆರಳುತ್ತಿದ್ದ ವಾಹನಗಳು ಗಂಟೆ ಗಟ್ಟಲೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾದು ನಿಲ್ಲಬೇಕಾಯಿತು. ಇದರಿಂದಾಗಿ ಅತ್ತಿಬೆಲೆಯಿಂದ ಸುಮಾರು 2 ಕಿ.ಮೀ.ಗೂ ಹೆಚ್ಚು ದೂರ ವಾಹನಗಳ ಸಾಲುಗಳು ಕಂಡು ಬಂದವು. ಸ್ಥಳದಲ್ಲಿ ಸೇರಿದ್ದ ಜನರನ್ನು ನಿಭಾಯಿಸಲು ಪೊಲೀಸರು ಪರದಾಡಿದರು