ಬೆಂಗಳೂರು.
ರಾಜಕಾರಣದಲ್ಲಿ ಪೂಜಾ ಫಲ ಫಲಿಸುತ್ತದೆಯಾ..? ಹೀಗೊಂದು ಪ್ರಶ್ನೆ ರಾಜ್ಯದಲ್ಲಿ ವ್ಯಾಪ್ತವಾಗಿ ಚರ್ಚೆಯಾಗುತ್ತಿದೆ ಇದಕ್ಕೆ ಪ್ರಮುಖ ಕಾರಣ ರಾಜ್ಯದ ಉನ್ನತ ಹುದ್ದೆಯಲ್ಲಿರುವ ನಾಯಕರೊಬ್ಬರು ಮಾಡಿರುವ ಪೋಸ್ಟ್.
ಪ್ರಯತ್ನ ಫಲಿಸದಿರಬಹುದು, ಆದರೆ ಪೂಜೆ ನಿಜಕ್ಕೂ ಫಲಿತಾಂಶ ನೀಡಲಿದೆ ಎಂಬ ವಿಶ್ವಾಸ ತಮಗಿದೆ ಎಂಬ ಅರ್ಥದಲ್ಲಿ ಇವರು ಮಾಡಿರುವ ಪೋಸ್ಟ್ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ರಾಜಕಾರಣದಲ್ಲಿ ಕಠಿಣ ಪರಿಶ್ರಮ ಜನಪ್ರಿಯತೆ ಮತ್ತು ಸಂಘಟನಾ ಚಾತುರ್ಯವೇ ಎಂದೆಂದಿಗೂ ಅಧಿಕಾರವನ್ನು ತಂದುಕೊಡುವ ಮಂತ್ರ ಎನ್ನುವುದು ಹೆಜ್ಜೆ, ಹೆಜ್ಜೆಗೂ ಸಾಬೀತಾಗಿದೆ. ಕ್ಷಿಪ್ರ ಬೆಳವಣಿಗೆಗಳು ಅಚ್ಚರಿಯ ವಿದ್ಯಮಾನದಲ್ಲಿ ಅಧಿಕಾರ ಹಿಡಿದ ನಾಯಕರು ಅಷ್ಟೇ ಬೇಗ ಜನ ಮಾನಸದಿಂದ ಮರೆಯಾಗಿದ್ದಾರೆ.
ಜನಪ್ರಿಯ ನಾಯಕ, ಸಂಘಟನಾ ಚತುರರು ಹಾಗೂ ದೊಡ್ಡ ಪ್ರಮಾಣದ ಹಿಂಬಾಲಕರ ಪಡೆಯನ್ನು ಹೊಂದಿರುವ ನಾಯಕರು ಕೆಲವೊಮ್ಮೆ ಹಿನ್ನಡೆ ಅನುಭವಿಸಿದರೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಯಶಸ್ಸನ್ನು ಗಳಿಸಿದ ಹಲವಾರು ಉದಾಹರಣೆಗಳು ಕಣ್ಣ ಮುಂದಿವೆ.
ನಿರಂತರವಾಗಿ ದೇವಾಲಯಗಳಿಗೆ ಭೇಟಿ ನೀಡುವುದು ವಿಶೇಷ ಪೂಜೆ ಪುನಸ್ಕಾರಗಳಲ್ಲಿ ತೊಡಗುವುದು ಹೋಮ ಹವನಗಳನ್ನು ನಡೆಸುವುದು ಎಂದಿಗೂ ಅಧಿಕಾರವನ್ನು ತಂದು ಕೊಟ್ಟಿಲ್ಲ ಎನ್ನುವುದು ಸಾರ್ವತ್ರಿಕ ಸತ್ಯವಾಗಿದೆ.
ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಪರಮ ದೈವ ಭಕ್ತ. ಔಪಚಾರಿಕವಾಗಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿರುವುದನ್ನು ಬಿಟ್ಟರೆ ಅವರೆಂದಿಗೂ ತಾವಾಗಿಯೇ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಹೋಮ ಹವನ ಗಳಲ್ಲಿ ಪಾಲ್ಗೊಂಡಿಲ್ಲ ಎನ್ನುವುದು ಗಮನಾರ್ಹ.
ಇನ್ನು ರಾಜ್ಯದ ವಿಷಯಕ್ಕೆ ಬರುವುದಾದರೆ ಅತ್ಯಂತ ಹೆಚ್ಚು ಪೂಜೆ ಪುನಸ್ಕಾರ ವಿಶೇಷ ಹೋಮ ಹವನಗಳಲ್ಲಿ ತೊಡಗುವುದರಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಅವರ ಕುಟುಂಬ ಸದಸ್ಯರು ನಿಲ್ಲುತ್ತಾರೆ. ಅದರಲ್ಲೂ ಮಾಜಿ ಮಂತ್ರಿ ರೇವಣ್ಣ ಅವರಂತೂ ಪೂಜೆ ಮಾಡದೆ ಮನೆಯಿಂದ ಹೊರಗೆ ಬರುವುದಿಲ್ಲ ರಾಹುಕಾಲ ನೋಡಿಯೇ ಅವರು ಹೆಜ್ಜೆ ಇಡುತ್ತಾರೆ ಹೀಗಿದ್ದರೂ ಅವರು ಕೆಲವೇ ವರ್ಷಗಳು ಮಾತ್ರ ಮಂತ್ರಿಯಾಗಿದ್ದರು ಅವರು ಮಾಡಿದ ಪೂಜೆ ನಡೆಸಿದ ಹೋಮ ಹವನಗಳನ್ನು ನೋಡಿದರೆ ಮಂತ್ರಿ, ಮುಖ್ಯಮಂತ್ರಿ ಅಲ್ಲ ದೇಶದ ಪ್ರಧಾನಿಯೇ ಆಗಬೇಕಿತ್ತು.
ಹೀಗಾಗಿ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಪುನಸ್ಕಾರ ಮತ್ತು ಹೋಮ ಹವನಗಳನ್ನು ನಡೆಸುವುದು ನಮ್ಮ ಮನಸ್ಸಿನ ತೃಪ್ತಿ ಹಾಗೂ ಸಮಾಧಾನಕ್ಕಾಗಿ ಹೊರತು ಅವುಗಳು ಎಂದಿಗೂ ಅಧಿಕಾರವನ್ನು ತಂದು ಕೊಡುವುದಿಲ್ಲ ಎನ್ನುವುದು ಸಾರ್ವತ್ರಿಕ ಸತ್ಯ.