ಬೆಂಗಳೂರು,ಏ.3- ವಿಧಾನಸಭೆ ಚುನಾವಣೆಯಲ್ಲಿ ಮತಗಳಿಸಲು ನಾನಾ ಕಸರತ್ತು ಮಾಡುತ್ತಿರುವ ರಾಜಕಾರಣಿಗಳು ಇದೀಗ ಮತದಾರರಿಗೆ ಆಮಿಷವೊಡ್ಡಲು ತಂತ್ರಜ್ಞಾನದ ಮೊರೆ ಹೊಕ್ಕಿದ್ದಾರೆ.
ಅಕ್ರಮ ತಡೆಗಟ್ಟಲು ಚುನಾವಣೆ ಆಯೋಗ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ ಹಲವೆಡೆ ಚೆಕ್ ಪೋಸ್ಟ್ ಹಾಗೂ ಸಂಚಾರಿ ತಪಾಸಣಾ ದಳಗಳನ್ನು ಸ್ಥಾಪಿಸಲಾಗಿದೆ ಹೀಗಾಗಿ ರಸ್ತೆ ಮಾರ್ಗಗಳಲ್ಲಿ ಹಣ ಸಾಗಿಸೋದು ಸವಾಲಿನ ಸಂಗತಿಯಾಗಿದೆ ಇದರಿಂದ ತಪ್ಪಿಸಿಕೊಳ್ಳಲು ಡಿಜಿಟಲ್ ಮಾರ್ಗ ಹಿಡಿದಿದ್ದಾರೆ.ಬೆಂಬಲಿಗರು,ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಹಣ ತಲುಪಿಸಲು ಗೂಗಲ್ ಪೇ, ಫೋನ್ ಪೇ, ಪೇಟಿಎಂ, ಆರ್‍ಟಿಜಿಎಸ್ ಐಎಂಪಿಎಸ್ ಸೇರಿದಂತೆ ಅನೇಕ ಡಿಜಿಟಲ್ ಮಾದರಿಯಲ್ಲಿ ಹಣ ಕಳಿಸಲು ಆರಂಭಿಸಿದೆ.
ಈಗ ಇದರ ಮೇಲೂ ಆಯೋಗ ಕಣ್ಣಿಟ್ಟಿದೆ.ಬ್ಯಾಂಕ್ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದು ಹಣ ವರ್ಗಾವಣೆ ಕುರಿತು ಕ್ಷಣ ಕ್ಷಣದ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.ಈ ವರ್ಗಾವಣೆಯ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಪೊಲೀಸ್ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ರಚಿಸಲಾಗಿದೆ.
ಆನ್‍ಲೈನ್ ಟ್ರಾನ್ಸಾಕ್ಷನ್‍ಗಳ ಮೇಲೆ ಹದ್ದಿನ ಕಣ್ಣಿಡಲು ಬೇಕಾದಂತೆ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಅಷ್ಟೇ ಅಲ್ಲದೇ, ಈ ತಂಡದ ಐಟಿ ಸದಸ್ಯರು ಈಗಾಗಲೇ ಅನುಮಾನಸ್ಪದ ಹವಾಲ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ ಎಂದು ಆಯೋಗದ ಮೂಲಗಳು ತಿಳಿಸಿವೆ.ಪ್ರತಿ ಕ್ಷೇತ್ರದಲ್ಲೂ ಕಂಟ್ರೋಲ್ ರೂಂ ಆರಂಭಿಸಲಾಗುತ್ತಿದ್ದು,ಇವು ಪ್ರಮುಖವಾಗಿ ಹಣಕಾಸು ವ್ಯವಹಾರ ಹಾಗೂ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಿದೆ.