ಮ್ಯಾನ್ಹಟನ್ – ಡೊನಾಲ್ಡ್ ಟ್ರಂಪ್ (Donald Trump) ಯುಎಸ್ಎ ದೇಶದ ಇತಿಹಾಸದಲ್ಲೇ ಅಪರಾಧ ಮಾಡಿದ ಆರೋಪ ಎದುರಿಸುತ್ತಿರುವ ಪ್ರಥಮ ಮಾಜಿ ಅಧ್ಯಕ್ಷರಾಗಿದ್ದಾರೆ. ಟ್ರಂಪ್ ಅವರು ಸುಮಾರು ೩೦ ಆರೋಪಗಳನ್ನು ಎದುರಿಸುತ್ತಿದ್ದಾರೆ ಮತ್ತು ಅವುಗಳ ಪೈಕಿ ಪ್ರಮುಖವಾಗಿ ವ್ಯಾಪಾರದಲ್ಲಿ ಮೋಸ ಮತ್ತು ವ್ಯಭಿಚಾರ ಮಾಡಿದ ಆರೋಪಗಳು ಸೇರಿವೆ.
೨೦೧೬ರ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಟ್ರಂಪ್ ಅವರು ತಾವು ಸಂಪರ್ಕ ಹೊಂದಿದ್ದ ಸ್ಟಾರ್ಮಿ ಡ್ಯಾನಿಯಲ್ಸ್ ಎನ್ನುವ ವೇಶ್ಯೆಗೆ ಆಕೆ ತಮ್ಮ ಜೊತೆಗಿನ ಸಂಬಂಧದ ವಿಷಯ ಹೊರಗೆಡುಹದಂತೆ ಸುಮ್ಮನಿರಲು ನೀಡಿದ್ದಾರೆನ್ನಲಾದ ಹಣದ ವಿಷಯವು ಈ ಆರೋಪ ಪಟ್ಟಿಯಲ್ಲಿ ಪ್ರಮುಖವಾಗಿದೆ.
ಕೋರ್ಟಿನಲ್ಲಿ ನ್ಯಾಯಾಧೀಶರ ಮುಂದೆ ಸ್ವಇಚ್ಛೆಯಿಂದ ಹಾಜರಾಗಲು ಒಪ್ಪಿರುವ ಟ್ರಂಪ್ ಈ ಎಲ್ಲಾ ಆರೋಪಗಳು ತಮ್ಮ ರಾಜಕೀಯ ವಿರೋಧಿಗಳು ತಮ್ಮ ವಿರುದ್ಧ ಮಾಡುತ್ತಿರುವ ಷಡ್ಯಂತ್ರ ಎಂದು ಹೇಳಿದ್ದಾರೆ. ತಮ್ಮ ಮಾರ್ ಆ ಲಾಗೊ ಬಂಗಲೆಯಲ್ಲಿ ಆರಾಮಾಗಿ ಕಾಲ ಕಳೆಯುತ್ತಾ ಈ ಪ್ರಕರಣವನ್ನು ತಮ್ಮ ರಾಜಕೀಯ ಭವಿಷ್ಯಕ್ಕೆ ಹೇಗೆ ಬಳಸಿಕೊಳ್ಳಬಹುದು ಎಂದು ಲೆಕ್ಕಾಚಾರ ಮಾಡುತ್ತಿರುವ ಟ್ರಂಪ್ ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಲು ತಯಾರಿ ನಡೆಸಿದ್ದಾರೆ.
ಈ ಆರೋಪಗಳ ಮೂಲಕ ಟ್ರಂಪ್ ಅವರನ್ನು ಕೋರ್ಟಿಗೆ ಎಳೆದ ತನಿಕಾಧಿಕಾರಿ ಬ್ರ್ಯಾಗ್ಸ್ ಬಗ್ಗೆ ರೆಪಬ್ಲಿಕನ್ನರು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಏನೇ ಆದರೂ ಈ ಪ್ರಕರಣವಂತೂ ಅಮೆರಿಕಾದಲ್ಲಿ ಒಂದು ಐತಿಹಾಸಿಕ ಘಟನೆಯಾಗಿ ರೂಪುಗೊಂಡಿರುವುದಂತೂ ಸತ್ಯ.