ಬೆಂಗಳೂರು,ಫೆ.11:
ಕಳೆದ ಕೆಲವು ದಿನಗಳಿಂದ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಾಮಾನಗಳು ನಿರ್ಣಾಯಕ ಘಟ್ಟ ತಲುಪಿವೆ. ಹಾಲಿ ಪಕ್ಷದ ರಾಜ್ಯ ಅಧ್ಯಕ್ಷರಾಗಿರುವ ವಿಜಯೇಂದ್ರ ಅವರನ್ನು ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಮುಂದುವರಿಸಲು ಹಸಿರು ನಿಶಾನೆ ತೋರಿಸುವ ಹೈಕಮಾಂಡ್ ಇದಕ್ಕಾಗಿ ಕೆಲವೊಂದು ಷರತ್ತುಗಳನ್ನು ವಿಧಿಸಿದೆ.
ಪಕ್ಷದ ರಾಜ್ಯಾಧ್ಯಕ್ಷರ ವಿಚಾರದಲ್ಲಿ ನಡೆಯುತ್ತಿರುವ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಮುಂದಾಗಿರುವ ಹೈಕಮಾಂಡ್ ವಿಜಯೇಂದ್ರ ಸೇರಿದಂತೆ ಪಕ್ಷದ ಕೆಲವು ಪ್ರಮುಖ ನಾಯಕರನ್ನು ದೆಹಲಿಗೆ ಕರೆಯಿಸಿಕೊಂಡು ಮಾತುಕತೆ ನಡೆಸಿದೆ.
ಪಕ್ಷದ ಸ್ಪಷ್ಟ ಸೂಚನೆಯ ನಂತರವೂ ನಿರಂತರವಾಗಿ ನಾಯಕತ್ವದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಶೋಕಾಸ್ ನೀಡಿದ ಹೈಕಮಾಂಡ್ ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷರಾಗಿ ಮುಂದುವರಿಸಲು ಒಲವು ವ್ಯಕ್ತಪಡಿಸಿದೆ.
ದೆಹಲಿಯಲ್ಲಿ ಬಿಡು ಬಿಟ್ಟಿರುವ ವಿಜಯೇಂದ್ರ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಮಾತನಾಡಿದ ಗೃಹ ಮಂತ್ರಿ ಅಮಿತ್ ಷಾ, ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ನಾಯಕ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ವಿಜಯೇಂದ್ರ ಅವರಿಗೆ ಕೆಲವು ಸ್ಪಷ್ಟ ಸೂಚನೆಗಳನ್ನು ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಕ್ಷದ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು ರಾಜ್ಯ ಪದಾಧಿಕಾರಿಗಳ ಪಟ್ಟಿ ಸಂಪೂರ್ಣ ಬದಲಾವಣೆಯಾಗಬೇಕು ವಿಭಾಗೀಯ ಪ್ರಧಾನ ಕಾರ್ಯದರ್ಶಿಗಳ ನೇಮಕ ಮಾಡಬೇಕು ಮತ್ತು ಪ್ರಮುಖ ನಾಯಕರನ್ನೊಳಗೊಂಡ ಕೋರ್ ಕಮಿಟಿ ರಚನೆ ಮಾಡಬೇಕು ಸೂಚಿಸಿದ್ದಾರೆ.
ಸಂಘಟನಾತ್ಮಕ ವಿಚಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನಡೆಸುವ ಹೋರಾಟಗಳ ಬಗ್ಗೆ ಯಾವುದೇ ಕಾರಣಕ್ಕೂ ಏಕ ಪಕ್ಷಿಯ ತೀರ್ಮಾನ ಕೈಗೊಳ್ಳಬಾರದು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಿದ ನಂತರವೇ ಕಾರ್ಯಕ್ರಮಗಳು ಜಾರಿಗೆ ಬರಬೇಕು ಇವುಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಯಾವುದೇ ರೀತಿಯ ಅಪಸ್ವರಗಳು ಕೇಳಿ ಬರದಂತೆ ನೋಡಿಕೊಳ್ಳಬೇಕು ಎಂದು ಸ್ಪಷ್ಟ ಸೂಚನೆ ನೀಡಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಪಕ್ಷದ ರಾಜ್ಯ ಹಿರಿಯ ನಾಯಕರನ್ನು ಎಲ್ಲಾ ಹಂತದಲ್ಲೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು. ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ತಾಕೀತು ಮಾಡಿರುವುದಾಗಿ ಗೊತ್ತಾಗಿದೆ.
ಪಕ್ಷ ಸದ್ಯ ಪ್ರಕಟಿಸಿರುವ ವೇಳಾಪಟ್ಟಿಯಂತೆ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ ಈ ಸಮಯದಲ್ಲಿ ಯಾವುದೇ ರೀತಿಯ ಗೊಂದಲಕ್ಕೆ ಅವಕಾಶವಿಲ್ಲದಂತೆ ನೋಡಿಕೊಳ್ಳಬೇಕು ಎಂಬ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.