ಬೆಂಗಳೂರು – ರಾಜ್ಯ ಸರ್ಕಾರದ ಪ್ರಭಾವಿ ಮಹಿಳಾ ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ಭ್ರಷ್ಟಾಚಾರ ಆರೋಪದ ದೂರೊಂದು ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಹಾರ ಪೂರೈಕೆಯ ಟೆಂಡರ್ ಪ್ರಕ್ರಿಯೆಯಲ್ಲಿ ಸುಮಾರಿಗೆ 600 ಕೋಟಿ ರೂ.ಗಿಂತಲೂ ಹೆಚ್ಚು ಅಕ್ರಮ ನಡೆದಿದೆ ಎಂದು ಆರೋಪಿಸಿ ವಕೀಲ ನಟರಾಜ್ ಶರ್ಮಾ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಅಂಗನವಾಡಿ ಮಕ್ಕಳಿಗೆ ನೀಡುವ ಪೌಷ್ಠಿಕ ಆಹಾರ ಸರಬರಾಜಿನಲ್ಲಿ ಅವ್ಯವಹಾರ ನಡೆದಿದೆ. ಅನರ್ಹಗೊಂಡಿರೋ ಸಹಕಾರ ಸಂಸ್ಥೆಗಳಿಗೆ ಪೌಷ್ಠಿಕ ಆಹಾರ ಪೂರೈಕೆ ಮಾಡುವ ಟೆಂಡರ್ ನೀಡಿದ್ದಾರೆ. ಬ್ಲಾಕ್ ಲೀಸ್ಟ್ ನಲ್ಲಿರುವ ಕ್ರಿಸ್ಟಿ ಫ್ರೈಡ್ ಗ್ರಾಮ್ ಕಂಪನಿ ಜೊತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಇಲಾಖೆ ಅಧಿಕಾರಿಗಳು ಶಾಮೀಲಾಗಿ ಈ ಟೆಂಡರ್ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಂಗನವಾಡಿಗಳಿಗೆ ಪೂರೈಕೆಯಾಗುವ ಆಹಾರದ ಗುಣಮಟ್ಟದ ಕುರಿತು ಹೈಕೋರ್ಟ್ ನೀಡಿದ್ದ ಆದೇಶ ಉಲ್ಲಂಘನೆ ಮಾಡಲಾಗಿದೆ. ಬ್ಲಾಕ್ ಲಿಸ್ಟ್‌ನಲ್ಲಿರುವ ಕಂಪನಿಗೆ ಆಹಾರ ಪೂರೈಕೆ ಮಾಡಲು ಟೆಂಡರ್ ನೀಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಇಲಾಖೆಯ ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar), ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜೆ.ಸಿ ಪ್ರಕಾಶ್ ಹಾಗೂ ನಿರ್ದೇಶಕರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ಅಕ್ರಮವಾಗಿ ಟೆಂಡರ್ ನೀಡುವ ಮೂಲಕ ಕಂಪನಿಗಳಿಂದ ಲಕ್ಷ್ಮಿ ಹೆಬ್ಬಾಳ್ಕರ್ ಶೇ.10 ರಷ್ಟು ಕಮಿಷನ್ ಸಹ ಪಡೆದಿದ್ದಾರೆ ಎಂಬುದಾಗಿಯೂ ದೂರಿನಲ್ಲಿ ಆರೋಪಿಸಲಾಗಿದೆ.
ಪೌಷ್ಟಿಕ ಆಹಾರ ಪೂರೈಸುವ ಸಂಸ್ಥೆ ಟೆಂಡರ್ ಪಡೆಯಲು ನೀಡಿರುವ ವಿಳಾಸದ ಕಂಪನಿಯೇ ಬೆಂಗಳೂರಿನಲ್ಲಿ ಇಲ್ಲ. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ವಿಚಾರವಾಗಿ ಸ್ಥಳಿಯ ಸಂಸ್ಥೆಗಳಿಗೆ ಟೆಂಡರ್ ನೀಡಬೇಕು ಎಂದು ಕೋರ್ಟ್ ಹೇಳಿದೆ. ಈ ನಿಯಮ ಕೂಡ ಉಲ್ಲಂಘನೆಯಾಗಿದೆ. 2011ರಲ್ಲಿ ಕ್ರಿಸ್ಟಿಫ್ರೈಡ್ ಕಂಪನಿಯಿಂದ ಅಂಗನವಾಡಿಗಳಿಗೆ ಆಹಾರ ಪೂರೈಕೆ ಮಾಡಲಾಗುತ್ತಿತ್ತು. ಆದ್ರೆ ಗುಣಮಟ್ಟ ಕಡಿಮೆಯಿದ್ದ ಕಾರಣ ಈ ಕಂಪನಿಯನ್ನು ಬ್ಲಾಕ್ ಲಿಸ್ಸ್‌ಗೆ ಸೇರಿಸಲಾಯಿತು. ಆದರೆ ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಕ್ರಿಸ್ಟಿ ಪ್ರೈಡ್ ಕಂಪನಿಗಳ ಅಧೀನದಲ್ಲಿ ಬರುವ ಮೂರು ಕಂಪನಿಗಳಿಗೆ ಟೆಂಡರ್ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.