ಬೆಂಗಳೂರು, ನ.18- ರಾಜ್ಯದಲ್ಲಿ ಖಾಲಿ ಇರುವ ಪೊಲೀಸ್ ಸಬ್ ಇನ್ಸ್‍ಪೇಕ್ಟರ್ (PSI Exam) ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಪ್ರಕ್ರಿಯೆ ಆರಂಭಿಸಲಿದ್ದು,ಒಟ್ಟು 1540 ಮಂದಿ ನೇಮಕ ಮಾಡಿಕೊಳ್ಳಲಾಗುತ್ತದೆಎಂದು ಗೃಹ ಸಚಿವ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ಆದೇಶದಂತೆ 545 ಹುದ್ದೆಗಳ ಭರ್ತಿಗೆ ಮರು ಪರೀಕ್ಷೆ ಮಾಡಬೇಕಿದೆ. ಸದ್ಯ 400 ಹುದ್ದೆಗಳು ಖಾಲಿ ಇವೆ. ಇದರ ಜೊತೆಗೆ 600 ಹೆಚ್ಚುವರಿ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಯ ಅನುಮೋದನೆ ಪಡೆಯಲಾಗಿದೆ. ಇದೂ ಸೇರಿದಂತೆ ಒಟ್ಟು 1540 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಹೈಕೋರ್ಟ್ ಸ್ವತಂತ್ರ ಸಂಸ್ಥೆಯಿಂದ ಪರೀಕ್ಷೆ ನಡೆಸಿ ಎಂದು ಸೂಚನೆ ನೀಡಿದೆ. ಪೊಲೀಸ್ ಇಲಾಖೆಯಿಂದ ಪರೀಕ್ಷೆ ನಡೆಸಬಾರದು ಎಂದು ಹೇಳಿದೆ ಈ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮರು ಪರೀಕ್ಷೆ ಹಾಗೂ ಹೊಸ ಪರೀಕ್ಷೆಗಳನ್ನು ನಡೆಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರಗಳು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ಸ್ವತಂತ್ರ ಸಂಸ್ಥೆಗಳಿವೆ. ನ್ಯಾಯಾಲಯದ ಆದೇಶ ದೊರೆತ ನಾಲ್ಕೈದು ದಿನಗಳಲ್ಲೇ ಸರ್ಕಾರ ಅಧಿಸೂಚನೆ ಹೊರಡಿಸಿ, ಕರ್ನಾಟಕ ಪರೀಕ್ಷಾ ಪ್ರಾಕಾರದಿಂದ ಪಿಎಸ್‍ಐ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಸಲು ನಿರ್ಧರಿಸಿದೆ ಎಂದರು.
ವಿದ್ಯಾರ್ಥಿಗಳ ಭವಿಷ್ಯ ಹಾಗೂ ಇಲಾಖೆಯ ಕಾರ್ಯಧ್ಯಕ್ಷತೆ ದೃಷ್ಟಿಯಿಂದ ಶೀಘ್ರವೇ ಮರು ಪರೀಕ್ಷೆಯಾಗಬೇಕಿದೆ. ವಿಳಂಬ ಮಾಡಲು ಸಾಧ್ಯವಿಲ್ಲ. ಬೇರೆ ಇಲಾಖೆಗಳಂತೆ ನೇಮಕಾತಿಯಾದ ತಕ್ಷಣವೇ ಕೆಲಸಕ್ಕೆ ನಿಯೋಜನೆ ಮಾಡಲು ಪೊಲೀಸ್ ಇಲಾಖೆಯಲ್ಲಿ ಸಾಧ್ಯವಿಲ್ಲ. ಒಂದು ವರ್ಷ ತರಬೇತಿ ನೀಡಬೇಕಿದೆ. ಮೈಸೂರಿನಲ್ಲಿರುವ ನಮ್ಮ ತರಬೇತಿ ಸಂಸ್ಥೆಯ ಸಾಮಥ್ರ್ಯ 300 ರಿಂದ 400 ಮಂದಿಯಷ್ಟೆ ,ಅದನ್ನು ಹೆಚ್ಚಿಸಬೇಕಿದೆ. ನೇಮಕಾತಿಯ ಜೊತೆಗೆ ತರಬೇತಿಯ ಸಾಮಥ್ರ್ಯವನ್ನು ಗಮನದಲ್ಲಿ ಇರಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಪೊಲೀಸ್‍ಠಾಣೆಗಳಲ್ಲಿ ಪಿಎಸ್‍ಐಗಳೇ ಇಲ್ಲವಾಗಿ, ಸಾವಿರಾರು ಹುದ್ದೆಗಳು ಖಾಲಿ ಇವೆ. ನಿಯಮ 32ನ್ನು ಜಾರಿ ಮಾಡಿ 600 ಪಿಎಸ್‍ಐಗಳಿಗೆ ಇತ್ತೀಚೆಗೆ ಬಡ್ತಿ ನೀಡಿದ್ದೇವೆ. ಅವರು ಈಗ ಪಿಎಸ್‍ಐಗಳಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಈಗಾಗಲೇ 400 ಹುದ್ದೆಗಳು ಈಗಾಗಲೇ ಖಾಲಿಯಾಗಿವೆ. ಜೊತೆಯಲ್ಲಿ 600 ಹೆಚ್ಚುವರಿ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಹಾಗೂ ಗೃಹ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಒಂದು ಸಾವಿರ ಹಾಗೂ ಹಿಂದಿನ 540 ಸೇರಿ 1540 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕಿದೆ ಎಂದು ವಿವರಿಸಿದರು.