ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿ,ಹರಿಯಾಣ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೆಲವು ವಿದ್ಯಮಾನಗಳನ್ನು ಗಮನಿಸಿದಾಗ ಕೇಂದ್ರದ ತನಿಖಾ ಸಂಸ್ಥೆಗಳು ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿ ಕೆಲಸ ಮಾಡುತ್ತಿವೆ ಎಂಬುದು ಬಹಳ ಸ್ಪಷ್ಟವಾಗುತ್ತಿದೆ.
ಅದರಲ್ಲೂ ಸದ್ಯದಲ್ಲೇ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಪ್ರತಿಪಕ್ಷಗಳನ್ನು ಕಟ್ಟಿಹಾಕಲು ಇಂತಹದೊಂದು ತಂತ್ರ ನಡೆಯುತ್ತಿದೆಯಾ ಎಂಬ ಅನುಮಾನಗಳು ಬರುತ್ತಿವೆ.
ಈ ಅನುಮಾನ ನಿಜವೇ ಆದಲ್ಲಿ ಕರ್ನಾಟಕದಲ್ಲೂ ಸದ್ಯದಲ್ಲೇ ಇಂತಹ ದಾಳಿಗಳು ನಡೆಯಲಿವೆ. ರಾಜ್ಯ ವಿಧಾನಸಭೆ ಚುನಾವಣೆಗೆ ಈಗಾಗಲೇ ವೇದಿಕೆ ಸಜ್ಜುಗೊಳ್ಳುತ್ತಿದೆ.ಆಡಳಿತ ರೂಡ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆಯ ಜೊತೆಗೆ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿವೆ.ಇದು ಜನ ಸಾಮಾನ್ಯರ ಗಮನ ಸೆಳೆದಿದೆ.ಇದರಿಂದ ಕಂಗೆಟ್ಟಿರುವ ಬಿಜೆಪಿ ಇದೀಗ ಪ್ರತಿಪಕ್ಷಗಳನ್ನು ಹಣಿಯಲು ತನಿಖಾ ಸಂಸ್ಥೆಗಳನ್ನು ಬಳಸುವ ಸಾಧ್ಯತೆಯಿದೆ.
ಉನ್ನತ ಮೂಲಗಳ ಪ್ರಕಾರ ಸಿಬಿಐ,ಜಾರಿ ನಿರ್ದೇಶನಾಲಯ ಮತ್ತು ಮಾದಕ ದ್ರವ್ಯ ನಿಯಂತ್ರಣ ಘಟಕ ಈಗಾಗಲೇ ಪಟ್ಟಿ ಮಾಡಿ ದಾಳಿಗೆ ಸಿದ್ದತೆ ನಡೆಸಿವೆ.ಪ್ರಮುಖವಾಗಿ ಶಿವಕುಮಾರ್, ಸಿದ್ದರಾಮಯ್ಯ, ಕುಮಾರಸ್ವಾಮಿ, ಎಂ.ಬಿ.ಪಾಟೀಲ್, ಡಾ.ಪರಮೇಶ್ವರ್ ಮತ್ತವರ ಆಪ್ತರು ಈ ದಾಳಿಯಲ್ಲಿ ಸಿಲುಕುವ ಸಾಧ್ಯತೆಯಿದೆ.
ಸಿಬಿಐ ಈಗಾಗಲೇ ಮೂವತ್ತಕ್ಕೂ ಅಧಿಕ ಜನರ ಪಟ್ಟಿ ಮಾಡಿದ್ದು ನೋಟೀಸ್ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಇದಾದ ನಂತರದಲ್ಲಿ ಶೋಧ ಕಾರ್ಯ ನಡೆಸಲಿದೆ.
ಈ ಸಂಸ್ಥೆಗಳು ನಡೆಸುವ ಶೋಧ ಕಾರ್ಯಾಚರಣೆಗಳಿಗೆ ವ್ಯಾಪಕ ಪ್ರಚಾರ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ. ಹೀಗೆ ಶೋಧಕ್ಕೆ ಒಳಗಾಗುವ ವ್ಯಕ್ತಿಗಳು ಭ್ರಷ್ಟರು, ಅಪರಾಧಿಗಳು ಎಂದು ಬಿಂಬಿಸುವ ವ್ಯವಸ್ಥಿತ ಕಾರ್ಯಾಚರಣೆಯೂ ನಡೆಯುತ್ತಿದೆ.
ಸಂಶಯವೆಂಬ ಬೀಜವನ್ನು ಗಾಳಿಯಲ್ಲಿ ಬಿತ್ತಿ ಅದು ಮೊಳಕೆಯೊಡೆದು ಹೆಮ್ಮರವಾಗುವಂತೆ ನೋಡಿಕೊಳ್ಳಲಾಗುತ್ತದೆ ಇದೊಂದು ಕಡೆಯಾದರೆ ದಾಳಿಯ ಬೆನ್ನಲ್ಲೇ ಅವರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.ದಾಳಿಗೆ ಕಾರಣವಾದ ಇವರ ವಿರುದ್ಧದ ಆರೋಪದ ತನಿಖೆ ಪೂರ್ಣಗೊಳ್ಳುವವರಗೆ ಬ್ಯಾಂಕ್ ಖಾತೆಗಳು ಸೀಜ್ ಆಗಿರಲಿವೆ ಈ ಮೂಲಕ ಚುನಾವಣೆಯ ಸಮಯದಲ್ಲಿ ಪ್ರತಿಪಕ್ಷಗಳಿಗೆ ಸಂಪನ್ಮೂಲವೇ ಇಲ್ಲದಂತೆ ಮಾಡುವುದು ತಂತ್ರದ ಭಾಗವಾಗಲಿದೆ.ಇದಿಷ್ಟೇ ಅಲ್ಲ ಪ್ರತಿಪಕ್ಷಗಳಿಗೆ ಆಪ್ತರಾಗಿರುವ ಗುತ್ತಿಗೆದಾರರು, ಉದ್ಯಮಿಗಳು, ಹಣವಂತರಿಗೂ ಗಂಡಾಂತರ ಎದುರಾಗಲಿದೆ.
ಹರಿಯಾಣದಲ್ಲಿ ಈಗಾಗಲೇ ಪ್ರಯೋಗ ನಡೆದಿದೆ.ಅಲ್ಲಿ ಕಾಂಗ್ರೆಸ್ ಪಕ್ಷದ ಆಪ್ತ ಗುತ್ತಿಗೆದಾರ ರಕ್ಷಣಾ ಇಲಾಖೆಗೆ ಇಲೆಕ್ಟ್ರಿಕಲ್ ಉಪಕರಣ ಪೂರೈಕೆದಾರನ ಮನೆ ಮೇಲೆ ಸಿಬಿಐ ದಾಳಿ ನಢಸಿದ್ದು ಆತ ಹಾಗೂ ಆತನ ಸಂಪರ್ಕದ ಎಲ್ಲಾ ಕಾಂಗ್ರೆಸ್ ನಾಯಕರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಇದೊಂದು ರೀತಿಯಲ್ಲಿ ಆದರೆ ಮತ್ತೊಂದೆಡೆ
ಒಮ್ಮೆ ಕೇಂದ್ರ ತನಿಖಾ ತಂಡಗಳು ಕಾರ್ಯಾಚರಣೆ ಆರಂಭಿಸಿದರೆ ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗಳು ಅಂತಹವರ ಜೊತೆ ಯಾವದೇ ಆರ್ಥಿಕ ವಹಿವಾಟು ನಡೆಸುವುದಿಲ್ಲ.ಹೀಗಾದಲ್ಲಿ ಪ್ರತಿಪಕ್ಷಗಳ ಜಂಘಾಬಲವೇ ಹುದುಗಿ ಹೋಗಲಿದೆ.
ಇಂತಹ ರಾಜಕೀಯ ಚಟುವಟಿಕೆಗಳು ಸದ್ಯದಲ್ಲೇ ರಾಜ್ಯ ರಾಜಕಾರಣದಲ್ಲಿ ಕಾಣ ಸಿಗುತ್ತವೆ.
Previous Articleರಷ್ಯನ್ ಸ್ಮಾರಕ ಧ್ವಂಸ ಮಾಡಿದ ಲ್ಯಾಟ್ವಿಯ
Next Article ಸಚಿವ ಅರಗ ವಿರುದ್ಧ ಲೋಕಾಯುಕ್ತಕ್ಕೆ ದೂರು..