ಬೆಂಗಳೂರು,ಜೂ.27-
ಸಂವಿಧಾನದ ಪೀಠಿಕೆಯಿಂದ ಸಮಾಜವಾದ ಮತ್ತು ಜಾತ್ಯತೀತತೆ ಎಂಬ ಪದಗಳನ್ನು ತೆಗೆಯಬೇಕು ಎಂದು ಆರ್‌ಎಸ್ ಎಸ್ ನಾಯಕ ದತ್ತಾತ್ರೇಯ ಹೊಸಬಾಳೆ ನೀಡಿರುವ ಹೇಳಿಕೆಗೆ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಕೆಂಡಾಮಂಡಲರಾಗಿದ್ದಾರೆ
ಸಂವಿಧಾನವನ್ನು ಮುಟ್ಟಿದರೆ ರಕ್ತಕ್ರಾಂತಿಗೂ ಸರಿ ಸಂವಿಧಾನವನ್ನು ಉಳಿಸುವ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಕಾಂಗ್ರೆಸ್ ಪಕ್ಷ ಅಂತಹ ಯಾವ ಬೆಲೆ ತೆತ್ತಾದರೂ ಸರಿ ಸಂವಿಧಾನದ ಪೀಠಿಕೆಯನ್ನು ಬದಲಾಯಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಸಂಘಪರಿವಾರದ ಗುರುಗಳಾದ ಗೋಲ್ವಾಲ್ಕರ್, ಹೆಡ್ಗೆವಾರ್, ಸಾವರ್ಕರ್, ಇಂದ ಹಿಡಿದು ಈಗಿನ ಹೊಸಬಾಳೆ,ರಸಬಾಳೆವರೆಗೂ ಸಂವಿಧಾನವನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಆದರೆ ಕಾಂಗ್ರೆಸ್ ಇದರ ರಕ್ಷಣೆಗೆ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆಯವರ ಈ ಬದಲಾವಣೆ ಹೇಳಿಕೆಗೂ ನನ್ನ ಸವಾಲಿದೆ. ಜಾತ್ಯಾತೀತ ಹಾಗೂ ಸಮಾಜವಾದಿ ಪದಗಳನ್ನು ಬದಲಾಯಿಸಿದರೆ ಅದರ ಜಾಗದಲ್ಲಿ ಯಾವುದನ್ನು ಸೇರಿಸುತ್ತೀರಿ ಎಂದು ಬಹಿರಂಗವಾಗಿ ಹೇಳುವ ಧೈರ್ಯ ಇದೆಯಾ? ಸಮಾಜವಾದಿ ಜಾಗದಲ್ಲಿ ಬಂಡವಾಳವಾದವನ್ನು, ಜಾತ್ಯಾತೀತ ಜಾಗದಲ್ಲಿ ಜಾತಿಶ್ರೆಷ್ಠವಾದವನ್ನು ಸೇರಿಸುತ್ತೇವೆ ಎಂದು ಹೇಳುವ ಧೈರ್ಯ ಇದೆಯಾ ಎಂದು ಪ್ರಶ್ನಿಸಿದ್ದಾರೆ.
ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳುವ ಈ ಸಂವಿಧಾನ ವಿರೋಧಿಗಳು ಸಂವಿಧಾನಕ್ಕೆ ಪರ್ಯಾಯವಾಗಿ ಯಾವ ಸಿದ್ದಾಂತ ಅಳವಡಿಸಿಕೊಳ್ಳುತ್ತೇವೆ ಎಂದು ಹೇಳುವ ಧೈರ್ಯವಿಲ್ಲ. ಕನಿಷ್ಟ ಪಕ್ಷ ಸಂವಿಧಾನಕ್ಕೆ ಬದಲಾಗಿ ತಮ್ಮ ಮೂಲ ಸಿದ್ದಾಂತವಾದ ಮನುಸ್ಮೃತಿಯನ್ನು ಜಾರಿಗೆ ತರುತ್ತೇವೆ ಎಂದು ಹೇಳುವ ಧೈರ್ಯವೂ ಇಲ್ಲದ ಹೇಡಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂವಿಧಾನವನ್ನೆ ಬದಲಾಯಿಸುತ್ತೇವೆ”, “ನಮ್ಮನ್ನ ಗೌರವಿಸುವ ಸಂವಿಧಾನ ಬೇಕು”, “ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು”, “ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನ ಬಿಜೆಪಿ ಪಡೆದರೆ ಸಂವಿಧಾನ ಬದಲಾಯಿಸುವುದೇ ನಮ್ಮ ಗುರಿ” ಎಂದು ಸಂವಿಧಾನ ವಿರೋಧಿ ನಿಲುವುಗಳನ್ನು ವ್ಯಕ್ತಪಡಿಸಿದ್ದ ಬಿಜೆಪಿಯ ಮನಸ್ಥಿತಿಗಳ ಹಿಂದೆ ಸಂಘ ಪರಿವಾರ ಇರುವುದು ಸ್ಪಷ್ಟವಾಗುತ್ತದೆ ಎಂದಿದ್ದಾರೆ.